ಒಲುಮೆಯ (!) ಗೆಳೆಯ ಮಲ್ಲಿಕಾರ್ಜುನನಿಗೆ,
ನಿನ್ನ ಪ್ರೀತಿಯ (?) ಸ್ನೇಹಿತ, ಸಹಬಾಡಿಗ* 'ಮೊ'ನ ಹೃತ್ಪೂರ್ವಕ ನಮಸ್ಕ್ರಾರಗಳು.
ಪ್ರತಿ ತಿಂಗಳು ತಪ್ಪದೆ ಬರುವ ನಿನ್ನ ಈ ಅತ್ಯಂತ ಆಪ್ತತೆಯ ಪತ್ರಕ್ಕೆ ನಾನು ಕಾಯುತ್ತಿರುತ್ತೇನೆ.
ಉಳಿದೆಲ್ಲ ದಿನಗಳಲ್ಲಿ ಬರದೆ ಇರುವ ಸ್ನೇಹಮಯ ಪ್ರೀತಿ ಈ ಪತ್ರ ಬಂದ ಕೂಡಲೇ ನನ್ನಲ್ಲಿ ಉಕ್ಕಿಹರಿಯಲು ಆರಂಭಿಸುತ್ತೆ.
ನಿನ್ನಂತಹ ಸ್ನೇಹಿತನನ್ನು ಪಡೆದ ನಾನು ಧನ್ಯ !(ಈ ಮೇಲಿನ ಸಾಲುಗಳು ಇದೇ ತರಹ ತಪ್ಪದೇ ಪ್ರತಿ ತಿಂಗಳೂ ಬಾಡಿಗೆ ಬರುವವರೆಗೆ ಮಾತ್ರ ಸಂಬಂಧಿಸಿರುತ್ತವೆ)
ಇರಲಿ, ಹೇಗೆ ನಡೆಸಿದೆ ನಿನ್ನ ಜೀವನ ಅಲ್ಲಿ? ನೀನು ಅರೆಬೆಂದ ಹಸಿಬಿಸಿ ಊಟ ತಿಂದೂ ನಿನ್ನ (ಹಿಂ)ಭಾಗಗಳನ್ನು ಇನ್ನೂ ದಪ್ಪಗಾಗಿಸಿಕೊಂಡು ಬರುವಿಯೆಂದು ನಾನರಿತೇ ಈ ಮಾತನ್ನು ಕೇಳುತ್ತಿದ್ದೇನೆ.
ನೀನು ತುಂಬಾ ಜವಾಬ್ದಾರಿಯುತ ಮನುಷ್ಯ ಎಂದು ನಾನು ತಿಳಿದುಕೊಂಡಿದ್ದೇನೆ. ಆದರೆ ನಿನ್ನ ಈ ಪತ್ರದಲ್ಲಿ ಬಂದ ಸಾಲು "ಜವಾಬ್ದಾರನಲ್ಲಾ" ಓದಿ ಮನಸ್ಸಿಗೆ ಬೇಜಾರವಾಯಿತು.
ನನ್ನ ನಿನ್ನ ಸ್ನೇಹ ಕೇವಲ ಈ 'ಬಾಡಿ'ಗೆಗೆ ಸಂಬಂಧಿಸಿದ್ದಲ್ಲ. ನೀನು ಕಳುಹಿಸುವ ಆ ೨೭೦೦/- ರೂ.ಗಳು ಬಾಡಿಗೆ ಹಣವೆಂದು ನಾನು ಸಂತೋಷಪಡುವುದಿಲ್ಲ. ಅದರಲ್ಲಿ ನೀನು ತೋರಿಸುವ ಕಾಳಜಿ, ಜವಾಬ್ದಾರಿತನಕ್ಕೆ ನಾನು ಚಕಿತನಾಗುತ್ತೇನೆ.
ಅಂದ ಹಾಗೆ ಇಲ್ಲಿ ಎಲ್ಲವೂ ಕ್ಷೇಮ. ನಿನ್ನ ಕ್ಷೇಮ ಸಮಾಚಾರವನ್ನು ಮೇಲಿಂದ ಮೇಲೆ (?) ತಿಳಿಸುತ್ತಾ ಇರು.
ಈಗೀಗ ಕೆಲಸದಲ್ಲಿ ** ಜಾಸ್ತಿ ಕೊಡಬೇಕಾಗಿ ಬಂದಿದೆ. ಯಾಕೋ ಕಚೇರಿಯಲ್ಲಿ ರಾಜಕೀಯ ಹೆಚ್ಚಾಗಿ ಅದು ಕರ್ನಾಟಕದ ರಾಜಕೀಯಕ್ಕಿಂತಲೂ ಹೊಲಸಾಗಿ ಹೋಗಿದೆ. ಮೊದಲಿನ ತರಹ ಶ್ರದ್ಧೆಯಿಂದ ಕೆಲಸ ಮಾಡಲು ಮನಸ್ಸು ಒಪ್ಪುತ್ತಿಲ್ಲ. ಆದಷ್ಟು ಬೇಗನೆ ಓಡಿ ಹೋಗೋಣ ಅನಿಸುತ್ತೆ. ಆದರೆ ಹೋಗುವುದಾದರೂ ಎಲ್ಲಿ? ಎಂಬ ಯಕ್ಷ ಪ್ರಶ್ನೆಗೆ ಉತ್ತರಿಸಲಾಗದೆ ಬಾಲ ಮುದುಡಿಕೊಂಡು ಕೆಲಸ ಮಾಡುತ್ತೇನೆ.
ಅತ್ಯಂತ ಕ್ಷಿಪ್ರಗತಿಯಲ್ಲಿ ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿ ಒಂದಾದ ನಮ್ಮ ದೇಶದಲ್ಲಿ, ನಮ್ಮ ಘನ ಸರ್ಕಾರವು ಪಟ್ಟಣಗಳಲ್ಲಿ (ಅಂದರೆ ಬೆಂಗಳೂರಿನಲ್ಲಿ) ದಿನಕ್ಕೆ ಕೇವಲ ೪ ಗಂಟೆ ಲೋಡ್ ಶೆಡ್ಡಿಂಗ್ ಮತ್ತು ಗ್ರಾಮಗಳಲ್ಲಿ (ಮೈಸೂರು, ಹುಬ್ಬಳ್ಳಿ, ಬೆಳಗಾವಿಯಂತಹ ಕುಗ್ರಾಮಗಳು) ದಿನಕ್ಕೆ ೧೦ - ೧೪ ಗಂಟೆ ವಿದ್ಯುಚ್ಛಕ್ತಿಯನ್ನು ಕಡಿತಗೊಳಿಸುತ್ತಿದ್ದಾರೆ. ನಾನು ಇದು ೧೪ ಗಂಟೆ ವಿದ್ಯುಚ್ಛಕ್ತಿ ಕಡಿತವೋ ಅಥವಾ ೧೦ ಗಂಟೆ ವಿದ್ಯುತ್ ಪೂರೈಕೆಯೋ ತಿಳಿಯದೆ ಗಲಿಬಿಲಿಗೊಂಡಿದ್ದೇನೆ.
ಮತ್ತೆ ಸುಗ್ಗಿಯ ವೇಳೆ ಬಂದಿದೆ. ಜೋಳದ ರಾಶಿ, ಸೂರ್ಯಕಾಂತಿ, ಉಳ್ಳಾಗಡ್ದಿ ಆ ಸುಗ್ಗಿ ಅಲ್ಲಪೋ.. ಎಲೆಕ್ಷನ್ನೂ...... ಹೂಂ....ಅದ್ಯಾವ ಎಲೆಕ್ಷನ್ನು ಅಂತ ಕೇಳಬ್ಯಾಡ. ಐದು ವರ್ಷಾನೂ ಎಲೆಕ್ಷನ್ ನಡೀದ ನಡೀತಾವು. ಯಾವುದು ಅಂತ ಹೆಂಗ ಗೊತಾಗುತ್ತೆ? ನಮ್ಮ 'ಗೌಡ್ರು' ಜೋರಾಗಿ ಓಡಾಡೋದು ನೋಡ್ತಾ ಇದ್ರೆ ಇದು ದೊಡ್ಡ ಎಲೆಕ್ಷನ್ನೇ ಇರಬೇಕು ಅನಿಸುತ್ತೆ.
ಈ ಸಲ ಎಲ್ಲ ಯುವಕಾರ್ಯಕರ್ತರೇ ರಾಜಕೀಯಕ್ಕಿಳಿದಿದ್ದಾರೆ. ಆ ಎಲ್ಲ ಯುವಕರೂ ಈಗ ಮುದುಕರಾಗಿರುವ ರಾಜಕಾರಣಿಗಳ ಮಕ್ಕಳೋ ಮೊಮ್ಮಕ್ಕಳೋ ಸೊಸೆಯೋ ಅಳಿಯಂದಿರೋ ಅಕ್ಕನೋ ಭಾವನೋ ಇದ್ದಾರೆ ಅಷ್ಟೆ ! ಅದರಲ್ಲಿ ಏನೂ ತಪ್ಪಿಲ್ಲ ನೋಡು. ಮೇಷ್ಟ್ರ ಮಗಾ ಮೇಷ್ಟ್ರ ಆದ್ರೆ ತಪ್ಪಾ? ಅಂದ ಮೇಲೆ ರಾಜಕೀಯ ಗಣ್ಯ ವ್ಯಕ್ತಿಗಳ ಮಕ್ಕಳು ರಾಜಕಾರಣಿಗಲಾದರೆ ಯಾಕಿಷ್ಟು ಜನತೆಗೆ ಸಿಟ್ಟೋ? ತಿಳಿಯುತ್ತಿಲ್ಲ.
ಮತ್ತೆ ಒಂದು ಕಹಿ ಸುದ್ದಿ ಅಂದ್ರೆ, ಈ ನಮ್ಮ ಕ್ರಿಕೆಟ್ ಕಲಿಗಳು ಪಾಕಿಸ್ತಾನಗೆ ಹೋಗದೆ ಇದ್ದದ್ದು. ಇವ್ನೌನ ನಮ್ಮ ಕಲಿಗಳು ಹೋಗಿ ಅದ್ರಾಗಿನ ಒಂದು ಹುಲಿಗೆ ಗುಂಡೇಟ್ ಎನಾದ್ರ ಬಿದ್ದಿದ್ದಿದ್ದಿದ್ರ.... ಆ ಮಾತ್ ಬ್ಯಾರೆ ಆಕ್ಕಿತ್ತು. ಸೀದಾ ಯುದ್ಧಕ್ಕ ಹೋಗಭೌದಿತ್ತು ನಾವು. ಛೆ ! ಎಂಥಾ ಚಾನ್ಸ್ ಕಳಕೊಂಡ್ವೀ ನೋಡ್. ಮತ್ತ ಆ ಕಸಬ್ ಸಾಹೇಬ್ ಗ ಇನ್ನೂ ಇಚಾರಣೆ ನಡದೇ ನಡೀತದ. ಈಗ ಎಲೆಕ್ಷನ್ನೂ ಮುಂದ ಬಂದ್ವಾ... ಮತ್ತ ಅವ್ನಿಗೆ ಗಲ್ಲಿಗೆ ಹಾಕಿದ್ರ ಒಂದು ಪಾರ್ಟೀಗೆ ಲಾಸ್, ಹಾಕದೇ ಶಿಕ್ಷೆ ನೀಡಿದ್ರ ಇನ್ನೊಂದ ಪಾರ್ಟೀಗೆ ಲಾಸು. ಹಿಂಗಾಗಿ ಅವ್ನಿಗೇನ್ ಶಿಕ್ಷೆ ಆಗಲಿಕ್ಕಿಲ್ಲ ಬಿಡು, ಇನ್ನೂ 'ವಿಚಾರಣೆ' ಅಂದು ಮುಂದು ಹಾಕಿದರಾತು. ನಮ್ಮ ಮಕ್ಕಳೋ ಮೊಮ್ಮಕ್ಕಳೋ, ಅವನಿಗೆ ಬಿಡುಗಡೆ ಮಾಡಿ ನಮ್ಮ ದೇಶಾ ಶಾಂತಿ ಸ್ಥಾಪನೆ ಮಾಡೂದು ಪೇಪರದಾಗ ನೋಡ್ತಾರ.
ಮತ್ತ ಆ ಮುಂಬಯಿ ಘಟನೆ ಆದ ಮೇಲೆ ಇನ್ನೂವರೆಗೂ ಮತ್ತೊಂದು ಅಂಥಾ ದೊಡ್ಡ ಬಾಂಬು ಬಿದ್ದಿಲ್ಲಾ ನೋಡಪಾ... ಅಲ್ಲಿಲ್ಲೆ ಸಣ್ಣ ಸಣ್ಣ ಬಾಂಬು ಬಿದ್ದು ಹತ್ತಿಪ್ಪತ್ತು ಜನಾ ಸತ್ತಿದಾರೆ. ಅದೇನೂ ದೊಡ್ಡ ಮಾತಲ್ಲಾ ನೋಡು. ನಮ್ಮ ದೇಶದಾಗ ಈಗ ಭಾರಿ ಭದ್ರತಿ ಇದೆಯಪ್ಪಾ. ಏನಂದುಕೊಂಡಿ. ನಾಳೆ ಮತ್ಯಾವುದೋ ನಗರದಲ್ಲಿ ಬಾಂಬ್ ಬಿದ್ರೆ ಪಾಪ ಭದ್ರತಾ ಇಲಾಖೆಯವರಿಗೆ ಹೇಗೆ ಗೊತ್ತಾಗಬೇಕು ಹೇಳು? ಅವ್ರೇನೂ ಇಡೀ ದೇಶಾ ಚೆಕ್ ಮಾಡೋಕಾಗುತ್ತಾ? ಪ್ರತಿ ಪ್ರಜೆಯೂ ಯೋಧ ಅನ್ನೋದು ನಾವಿಲ್ಲಿ ಮರ್ತು ಬಿಡ್ತೀವಿ. ಇರಲಿ ನಾಳೆ ಮತ್ತೆಲ್ಲಾದ್ರೂ ಬಾಂಬ್ ಬಿದ್ರ ಆ ಸಾವಿಗೀಡಾದ ಸಂಸಾರಕ್ಕೆ ಅಂತಲೇ ಈ ಸಾರಿ ಬಜೆಟ್ಟಿನಲ್ಲಿ ರೂ.೫೮೭/- ಸಾವಿರ ಕೋಟಿ ಮಂಜೂರು ಮಾಡಿಸಿದ್ದಾರೆ. ಗೊತ್ತಾ?
ಅದನ್ನು ಇನ್ನು ಮುಂದೆ ಪಂಚವಾರ್ಷಿಕ ಯೋಜನೆಗಳಲ್ಲೂ ಮಂಜೂರು ಮಾಡಿಸುವತ್ತ ಅಭ್ಯಸಿಸಲು ಒಂದು ಕಮೀಟಿ ರೂಪಿಸಿದ್ದಾರೆ. ಆ ಕಮೀಟಿಗೂ ರೂ.೫೦/- ಕೋಟಿ ತೆಗೆದಿಟ್ಟಿದ್ದಾರೆ. ನೀನೆನೂ ಚಿಂತೆ ಮಾಡಬೇಡ. ಈ ಸಾರಿ ಊರಿಗೆ ಬಂದಾಗ ತಪ್ಪದೇ ನಿನ್ನ ತೆರಿಗೆ ಪಾವತಿ ಮಾಡಿ ಹೋಗು.
ಮತ್ತ ಇನ್ನೊಂದ್ ಸುದ್ದೀಪಾ...ಸೀನಿಯರ್ ಸಾಫ್ಟವೇರ್ ಇಂಜಿನೀಯರಾದ ನನಗೆ ಅಂತೂ ಕೊನೆಗೆ ಪಿ.ಯು.ಸಿ ಓದಿದ ಹುಡುಗಿ ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾಳೆ.. ಡಾ ಟಾ ಣಾ..
ದೇವ್ರು ಇನ್ನೂ ನಮ್ಮ ಕೈ ಬಿಟ್ಟಿಲ್ಲಾ... ನಮಗೂ ಮದ್ವೀ ಆಗ್ತಾರ ಹುಡುಗ್ಯಾರು. "ಪಿ.ಯು.ಸಿ" ಓ..ದಿದಾ..ಕೀ....... ಮಗನಾ.. ಖುಶಿ ಪಡು...ಅದೂ ಸಿಗಲ್ಲಾ ಇಲ್ಲಾಂದ್ರ.
ನಿನಗೂ ಎಸ್.ಎಸ್.ಎಲ್.ಸಿ ಪಾಸ್ ಆದ ಹುಡುಗಿ ಸಿಕ್ಕೇ ಸಿಗ್ತಾಳ, ಜಾಸ್ತಿ ಕೊರಗಬ್ಯಾಡಾ. ನಿನಗ ಡಿಗ್ರಿ ಓದಿದಾಕೀನ ಬೇಕು ಅಂದ್ರ ಇವತ್ತ ಈ ಸಾಫ್ಟವೇರ್ ನೌಕ್ರಿ ಬಿಟ್ಟು ಒಂದು ಆಟೋ ರಿಕ್ಷಾ ಖರೀದಿಸಿ ಬಾಡಿಗೆ ಬಿಡು, ಮಿನಿಮಮ್ "ಬಿ.ಎ" ಕಲಿತವಳು ಮದ್ವಿ ಆಗ್ತಾಳ ನಿನ್ನ ಜೊತೆ.
ಇನ್ನೂ ಏನೇನೋ ಬರೆಯಬೇಕು ಅಂದುಕೊಂಡಿದ್ದೆ, ಆದರೆ ಸಮಯಾಭಾವದಿಂದ ಬರೆಯಲಾಗುತ್ತಿಲ್ಲ.
ಮೇಲಿಂದ ಮೇಲೆ (!) ಪತ್ರ ಬರೆಯುತ್ತಿರು. ದೇವರು ಕರುಣಾಮಯಿ ಅವನು ಸದಾ ನಮ್ಮನ್ನು ರಕ್ಷಿಸುತ್ತಾನೆ.
ಇಂತಿ ನಿನ್ನ ಗೆಳೆಯ
--ಮೊ
ಸಹಬಾಡಿಗ: ಇಲ್ಲಿ 'ಬಾಡಿ'ಗ ಎಂದು ಓದಕೂಡದು. ರೂಮಿನಲ್ಲಿರದೇ ರೂಮಿನ ಬಾಡಿಗೆಯನ್ನು ಕೊಡುವವನಿಗೆ 'ಸಹಬಾಡಿಗ' ಎನ್ನುತ್ತಾರೆ.
Tuesday, March 10, 2009
ಗೆಳೆಯನಿಗೊಂದು ಪತ್ರ
Wednesday, December 24, 2008
ನನ್ನ ಸಂದರ್ಭದಲ್ಲಿ ಪರ್ಯಾಯ ಸಿನೆಮಾ
[ ಸಂವಾದ ತಂಡದವರು ಏರ್ಪಡಿಸಿದ್ದ 'ನನ್ನ ಸಂದರ್ಭದಲ್ಲಿ ಪರ್ಯಾಯ ಸಿನೆಮಾ' ಚರ್ಚಾಸ್ಪರ್ಧೆಗೆ ಕಳುಹಿಸಿದ್ದ ನನ್ನ ಬರಹ ]
'ಸಿನೆಮಾ' ಎಂಬುದು ಒಂದು ಊರಿನ ಜನರನ್ನ ಮಾತ್ರವಲ್ಲ, ದೇಶಗಳ ಗಡಿಗಳನ್ನಷ್ಟೇ ಅಲ್ಲ, ಸಪ್ತ ಸಾಗರ ಖಂಡಗಳಾಚೆಗೂ ಇರುವ ವಿವಿಧ ಬಣ್ಣಗಳ ಬೇರೆ ಬೇರೆ ವರ್ಗಗಳ ಎಲ್ಲಾ ವಯೋಮಾನದ, ವೈವಿಧ್ಯ ಬುದ್ಧಿಮಟ್ಟದ ಜನರನ್ನು ಸುಲಭವಾಗಿ ತಲುಪಲು ಇರುವಂತಹ ಒಂದು ಸುಂದರ ಸರಳ ಮಾಧ್ಯಮ. ಇದನ್ನು ಕೇವಲ 'ದೃಶ್ಯ ಮಾಧ್ಯಮ' ವೆಂದಾಗಿ ಕರೆದು ಇದರ ಉದ್ದೇಶ 'ಮನರಂಜನೆ' ಯಷ್ಟೇ ಎಂದು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ಇಂದು ಸಿನೆಮಾ, ಹಿಂದೆದಿಗಿಂತಲೂ ಇತರೆ ಯಾವುದೇ ಮಾಧ್ಯಮಗಳಿಗಿಂತಲೂ ಶಕ್ತಿಶಾಲಿಯಾದ ಸಂವಹನ ಮಾಧ್ಯಮವಾಗಿದೆ. ಇಂದಿನ ಆಗುಹೋಗು ಜೀವನವನ್ನು ನಾಳೆ ಬರುವ ಜನಾಂಗಕ್ಕೆ ಇತಿಹಾಸವನ್ನಾಗಿ ಬಿಚ್ಚಿಡಬಲ್ಲ ಜಾದೂಮಂತ್ರವಾಗಿದೆ.
ನಾಗರೀಕತೆಯ ಬಹುಮುಖ್ಯವಾದ ಬೆಳವಣಿಗೆಗಳಲ್ಲಿ 'ಭಾಷೆ' ಯ ಹುಟ್ಟು ಎಲ್ಲ ಕ್ರಾಂತಿಗಳಿಗೂ ನಾಂದಿಯಾಯಿತು. ಮನುಜನಿಗೆ ಸಂವಹಿಸಲಿಕ್ಕೆ ಒಂದು ಮಾಧ್ಯಮದ ಅವಶ್ಯಕತೆ ಇತ್ತು; ಒಬ್ಬರು ಇನ್ನೊಬ್ಬರನ್ನು ಅರ್ಥೈಸಲು, ಒಬ್ಬರು ಹಲವರಿಗೆ ಗೊತ್ತಾಗಲು, ಹಲವರ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು, ವಿಚಾರಗಳನ್ನು ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗಿಸಿದ್ದು 'ಭಾಷೆ' ಎಂಬ ಮಾಧ್ಯಮ. ಇಂದು ನಾವು ಕಾಣುವ ಪ್ರಿಂಟ್ ಮಾಧ್ಯಮ, ಶ್ರವಣ ಮಾಧ್ಯಮ, ದೃಶ್ಯ ಮಾಧ್ಯಮ ಇನ್ನೂ ಹಲವಾರು ಬೇರೆ ಬೇರೆ ತರಹದ ಎಲ್ಲ ಮಾಧ್ಯಮಗಳೂ ಈ ಭಾಷೆಯ ಮಕ್ಕಳು ಮರಿ ಮೊಮ್ಮಕ್ಕಳೇ. 'ಸಿನೆಮಾ' ಎಂಬುದು ಇಂತಹ ಹಲವು ಮಾಧ್ಯಮಗಳ ಹೈಬ್ರೀಡ್ ಮಾಧ್ಯಮ. ಭಾಷೆಯೆಂಬ ಮಾಧ್ಯಮ ಒಂದು ನಾಗರೀಕತೆಯನ್ನು ಒಂದು ಸ್ತರದಿಂದ ಇನ್ನೊಂದು ಸ್ತರಕ್ಕೆ ಒಯ್ಯುವಲ್ಲಿ ಹೇಗೆ ಯಶಸ್ವಿಯಾಯಿತೋ ಹಾಗೆಯೇ ಈ 'ಸಿನೆಮಾ' ಎಂಬ ಅಪರೂಪದ ಸಾಧನ ಇಂದಿನ ಯುಗದಲ್ಲಿ ಬಹುಮುಖ್ಯ ಪಾತ್ರವಹಿಸಲಿಕ್ಕಿದೆ. ಇಲ್ಲಿ ಏನನ್ನು ವ್ಯಕ್ತಪಡಿಸಲಿಕ್ಕೆ ಪ್ರಯತ್ನಿಸುತ್ತಿದ್ದೇನೆಂದರೆ ಚಲನಚಿತ್ರ ಅಥವಾ ಸಿನೆಮಾವನ್ನು ಕೇವಲ 'ಮನರಂಜನೆ' ಸಾಧನವಾಗಿ ಬಳಸಿಕೊಳ್ಳುವುದಕ್ಕಿಂತ ಇದಕ್ಕೆ ತನ್ನದೇ ಆದ ಹರವು, ಜವಾಬ್ದಾರಿ, ಪ್ರಾಮುಖ್ಯತೆಗಳಿವೆ ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ.
ಚರ್ಚೆಯ ಮೂಲ ಪ್ರಶ್ನೆಗೆ ಬರೋಣ. 'ಇಂದಿನ ಸಿನಿಮಾಗಳು ನಮ್ಮ ನಿರೀಕ್ಷೆಯ ಮಟ್ಟದಲ್ಲಿವೆಯೇ?' . ಈ ಪ್ರಶ್ನೆಯಲ್ಲಿ 'ನಮ್ಮ' ಎಂಬುದು ಕೇವಲ ಪ್ರೇಕ್ಷಕ ಅಂತ ತಿಳಿದು ವಾದಕ್ಕಿಳಿದರೆ, ಚರ್ಚೆಯ ಸಂಪೂರ್ಣ ಸ್ವರೂಪವನ್ನು ನಾವು ಕಳೆದುಕೊಳ್ಳಬಹುದೇನೋ.
'ಇಂದಿನ ಸಿನಿಮಾಗಳು ನಮ್ಮ ನಿರೀಕ್ಷೆಯ ಮಟ್ಟದಲ್ಲಿವೆಯೇ?' ಎಂಬ ಪ್ರಶ್ನೆಯಲ್ಲಿ ಬರುವ 'ನಮ್ಮ' ಎಂಬುದಕ್ಕೆ ಮೂರು ಪಾತ್ರಗಳನ್ನು ಆಪಾದಿಸಲು ಬಯಸುತ್ತೇನೆ.
೧. ಪ್ರೇಕ್ಷಕ.
೨. ತಾರಾಗಣ (ನಟ-ನಟಿಯರು) ಮತ್ತು ತಾಂತ್ರಿಕ ಗಣ. ಸಂಗೀತ, ಸಾಹಿತ್ಯ ಈ ಎರಡರಲ್ಲಿ ಯಾವುದಾದರೂ ಗುಂಪಿಗೆ ಒಳಪಡಿಸಬಹುದು.
೩. ನಿರ್ಮಾಣ, ಪ್ರದರ್ಶನ ಮತ್ತು ಹಂಚಿಕೆ.
ಈಗ ಆ ಪ್ರಶ್ನೆಯನ್ನು ಈ ಮೂರು ಪಾತ್ರಗಳಿಗೆ ಪರಾಮರ್ಶಿಸೋಣ.
'ಇಂದಿನ ಸಿನಿಮಾಗಳು ಪ್ರೇಕ್ಷಕನ ನಿರೀಕ್ಷೆಯ ಮಟ್ಟದಲ್ಲಿವೆಯೇ?'
ಇದಕ್ಕೆ ೪೦-೬೦ ಎಂದು ಉತ್ತರ ನೀಡಬಹುದು. ಅಂದರೆ ತಯಾರಾಗುವ ಪ್ರತಿ ಹತ್ತು ಚಿತ್ರಗಳಲ್ಲಿ ೪ ಚಲನಚಿತ್ರಗಳು ಮಾತ್ರ ಪ್ರೇಕ್ಷಕನ ನಿರೀಕ್ಷೆಗೆ ತಕ್ಕವುದಾಗಿವೆ. ಉಳಿದ ಅರ್ಧಕ್ಕಿಂತಲೂ ಹೆಚ್ಚಿನ ಸಿನೆಮಾಗಳು ಪ್ರೇಕ್ಷಕನ ನಿರೀಕ್ಷೆಯನ್ನು ಮುಟ್ಟುತ್ತಿಲ್ಲ. ಪ್ರೇಕ್ಷಕ ಎಂದರೆ ಅವನ ಅಭಿರುಚಿಗಳೂ ಬೇರೆ ಬೇರೆ ಯಾಗಿರಬಹುದು. ಎಲ್ಲ ಅಭಿರುಚಿಯ ಪ್ರೇಕ್ಷಕರ ನಿರೀಕ್ಷೆಯನ್ನು ಮುಟ್ಟುವಲ್ಲಿ ನಮ್ಮ ಇಂದಿನ ಚಲನಚಿತ್ರಗಳು ಯಶಸ್ವಿಯಾಗಿಲ್ಲ ಎಂದು ಹೇಳಬಹುದು. ವಿಭಿನ್ನ ಕಥಾಹಂದರವುಳ್ಳ ಸಿನೆಮಾಗಳು ಬರುತ್ತಿವೆಯಾದರೂ ಹಲವು ಏಳನೇ ತಿಂಗಳಲ್ಲಿ ಹುಟ್ಟಿದ ಕೂಸಿನಂತಿರುತ್ತವೆ. ಟಿಕೆಟ್ಟುಗಳ ಬೆಲೆ ಏರಿಕೆಯಿಂದಾಗಿ ಪ್ರೇಕ್ಷಕ ಮಹಾಶಯನ ಅಪೇಕ್ಷೆಯ ಮಟ್ಟವೂ ಮುಗಿಲಿಗೇರಿದೆ. ಕೊಟ್ಟ ಕಾಸಿಗೆ ಗಿಟ್ಟಬೇಕು ಎನ್ನುವುದು ಸಹಜ. ಈ ಗಿಟ್ಟುವಿಕೆ ಪ್ರೇಕ್ಷಕನ ಅಭಿರುಚಿಗೆ ಬಿಟ್ಟಿದ್ದು. ಹೀಗೆಂದು ಪರ್ಯಾಯ ಸಿನೆಮಾಗಳಿಗೆ ಪ್ರೇಕ್ಷಕ ಸಹಕರಿಸುತ್ತಿಲ್ಲ ಎಂದು ಆರೋಪಿಸುವಂತಿಲ್ಲ. ಏಕೆಂದರೆ ಇಂದು ನಡೆಯುತ್ತಿರುವ ಹಲವು ಹೊಸಪ್ರಯತ್ನಗಳೇ ಸಾಕ್ಷಿ ಪ್ರೇಕ್ಷಕ ಪ್ರಾಯೋಗಿಕ ಸಿನೆಮಾದ ಕಡೆಗೂ ಒಲಿದಿದ್ದಾನೆ ಎಂಬುದು. ಆದರೂ ಇಂದಿನ ಸಿನೆಮಾಗಳು ಪ್ರೇಕ್ಷಕ ಪ್ರಭುವಿನ ನಿರೀಕ್ಷೆ ಸಂಪೂರ್ಣವಾಗಿ ತಲುಪಿಯೇ ಇಲ್ಲ.
'ಇಂದಿನ ಸಿನಿಮಾಗಳು ತಾರಾಗಣ ಽ ತಾಂತ್ರಿಕ ವರ್ಗದ ನಿರೀಕ್ಷೆಯ ಮಟ್ಟದಲ್ಲಿವೆಯೇ?'
ಇಲ್ಲಿ ಕಂಡು ಬಂದಷ್ಟು ವೈವಿಧ್ಯತೆ ಪ್ರಾಯೋಗಿಕತೆ ಇತ್ತೀಚಿನ ದಿನಗಳಲ್ಲಿ ಸಿನೆಮಾದ ಯಾವುದೇ ವಿಭಾಗದಲ್ಲೂ ಕಂಡು ಬಂದಿಲ್ಲ. ಇಂದು ಪ್ರತಿ ಸಿನಿಮಾಕ್ಕೊಂದು ಹೊಸ ತಾರಾಗಣ ಮತ್ತು ತಾಂತ್ರಿಕ ಬಳಗವಿರುತ್ತದೆ. ಹೊಸಬರಿಗೆ ಅವಕಾಶಗಳು ಜಾಸ್ತಿಯಾಗಿವೆ. ಆದರೆ ನಟನೊಬ್ಬ, ನಿರ್ದೇಶಕನೊಬ್ಬ , ಕ್ಯಾಮೆರಮನ್, ಸಾಹಿತ್ಯ, ಸಂಗೀತ ನಿರ್ದೇಶಕನಿಗೆ ತೃಪ್ತಿ ನೀಡಬಲ್ಲಂತಹ ಸಿನೆಮಾಗಳು ಇಂದು ತಯಾರಾಗುತ್ತಿವೆಯೇ? ಇದಕ್ಕುತ್ತರ ೬೦-೪೦ ಎನ್ನಬಹುದು. ಅಂದರೆ ತಯಾರಾಗುವ ಪ್ರತಿ ಹತ್ತು ಚಿತ್ರಗಳಲ್ಲಿ ೬೦% ಚಿತ್ರಗಳು ಈ ವರ್ಗದ ಅಪೇಕ್ಷೆಯನ್ನು ಮುಟ್ಟುತ್ತಿವೆ. ಆದರೆ ಇನ್ನೂ ೪೦% ನಿರೀಕ್ಷೆಯ ಮಟ್ಟ ಬಾಕಿ ಇದೆ. ಯಾವುದೇ ಒಂದು ಶಾಟ್ ಗೆ ಬೇಕಾಗಿರುವಂತಹ ಕ್ಯಾಮೆರಾ ದೊರೆಯದೇ ಇರಬಹುದು, ನಟನೆಯಲ್ಲಿ ಸವಾಲೆನಿಸುವಂತಹ ಪಾತ್ರವಿರಬಹುದು. ಸಂಗೀತ ಮತ್ತು ಸಾಹಿತ್ಯಗಳು 'ಫಿಲ್ಲರ್' ಗಳಾಗಿ ಬಿಟ್ಟಿವೆ. ಅವುಗಳೂ ಒಂದು ಸಿನೆಮಾದ ಶಕ್ತಿಯಾಗಬಹುದು ಅನ್ನುವುದನ್ನು ಮರೆಯುತ್ತಿದ್ದೇವೆ. ಹೀಗಾಗಿ ಇಲ್ಲಿ ಹೊಸದೆಂತಹುದನ್ನೋ ಸಾಧಿಸಬೇಕೆನ್ನುವವರ ನಿರೀಕ್ಷೆ ಪೂರೈಸುತ್ತಿಲ್ಲ.
'ಇಂದಿನ ಸಿನಿಮಾಗಳು ನಿರ್ಮಾಣ, ಪ್ರದರ್ಶನ ಮತ್ತು ಹಂಚಿಕೆ ವರ್ಗದವರ ನಿರೀಕ್ಷೆಯ ಮಟ್ಟದಲ್ಲಿವೆಯೇ?'
ಎಂತಹ ಕಲೋಪಾಸಕ ಸದಭಿರುಚಿಯುಳ್ಳ ನಿರ್ಮಾಪಕನಿದ್ದರೂ ಗುಣಮಟ್ಟ, ಸಂದೇಶ, ಸಮಾಜಪರ ಕಾಳಜಿ ಎಲ್ಲ ಇಲ್ಲಿ ಮುಖ್ಯವಾಗುವುದಿಲ್ಲ. ಇಲ್ಲಿ ಮುಖ್ಯವಾಗುವುದು 'ಹಾಕಿದ ದುಡ್ಡು ಮರಳಿ ಬಂದೀತೇ?' ಎನ್ನುವ ಲೆಕ್ಕಾಚಾರ. ಇದು ಅಪ್ಪಟ ವ್ಯವಹಾರದ ಲೋಕ. ಹಾಕಿದ ದುಡ್ಡಿಗೆ ಲಾಭಗಳಿಸದಿದ್ದರೆ ಈ ಗುಂಪಿನ ನಿರೀಕ್ಷೆ ನಮ್ಮ ಇಂದಿನ ಸಿನೆಮಾಗಳು ಸಾಧಿಸುತ್ತಿಲ್ಲ ಎಂದೇ ಅರ್ಥ. ಇಂದು ಸಿನೆಮಾ ಹಿಂದೆಂದಿಗಿಂತಲೂ ದೊಡ್ಡದಾದ ಪ್ರಪಂಚಾದ್ಯಂತ ಮಾರುಕಟ್ಟೆ ಹೊಂದಿದೆ. ಇತ್ತೀಚಿನ ಗಳಿಕೆಗಳನ್ನು ಹೆಸರಿಸಿದರೆ ಇಲ್ಲಿ ನಿರೀಕ್ಷೆಯ ಫೇಲ್ಯೂರ್ ಮಟ್ಟ ಕಡಿಮೆ ಇದೆ. ' ಸೌ ಸೋನಾರ್ ಕೆ , ಏಕ್ ಲೋಹಾರ್ ಕಾ ' ಎಂಬಂತಿದೆ ಪರಿಸ್ಥಿತಿ. ಒಂದು ದೊಡ್ಡ ಚಿತ್ರ ನೆಲಕಚ್ಚುವಿಕೆ ಒಬ್ಬ ನಿರ್ಮಾಪಕನ ಬದುಕಿನ ಪಥವನ್ನೇ ಬದಲಿಸಬಲ್ಲದು. ಇದಕ್ಕೆ ಪರಿಹಾರವೆಂಬಂತೆ ಸರಕಾರ ಪ್ರಶಸ್ತಿ ನೀಡಿ ಸಹಕಾರ ಧನ ನೀಡುತ್ತದೆಯಾದರೂ ಇಂದಿನ ಗ್ಲೋಬಲ್ ಮಾರುಕಟ್ಟೆಗೆ ತಕ್ಕ ಪರಿಹಾರೋಪಾಯಗಳು ಬೇಕಾಗಿವೆ. ಆಗ ಖಂಡಿತವಾಗಿಯೂ ನಮ್ಮ ಸಿನೆಮಾಗಳು ಈ ವರ್ಗದವರ ನಿರೀಕ್ಷೆ ಮುಟ್ಟುವಲ್ಲಿ ಯಶಸ್ಸು ಸಾಧಿಸಬಹುದು. ಹೆಚ್ಚು ಹೆಚ್ಚು ನಿರ್ಮಾಣ ಸಂಸ್ಥೆಗಳು ಕೈ ಹಾಕಬಹುದು. ಇದು ಇನ್ನೂ ಹೆಚ್ಚಿನ ಸಿನೆಮಾಗಳು ಬಿಡುಗಡೆಯಾಗುವುದಕ್ಕೆ ಪೂರಕವಾಗುತ್ತದೆ.
ಈ ಸಂವಾದದ ಉತ್ತರಾರ್ಧಕ್ಕೆ ಬಂದರೆ 'ಪರ್ಯಾಯ ಸಿನೆಮಾ' ಎಂದರೆ ಹೇಗಿರಬೇಕು? ಎಂಬ ಪ್ರಶ್ನೆಗೆ ಕೆಲವು ಮಾರ್ಗಗಳನ್ನು ಕಂಡುಕೊಳ್ಳುವಲ್ಲಿ ಪ್ರಯತ್ನಿಸೋಣ.
'ಹೇಗಿರಬೇಕು?'ದಕ್ಕೆ ಉತ್ತರವನ್ನು ಈ ಕೆಳಗಿನ ಗುಂಪುಗಳಲ್ಲಿ ಕಂಡುಕೊಳ್ಳೋಣ.
ಅ] ವಿಷಯ
ಬ] ಅವಧಿ
ಕ] ತಾಂತ್ರಿಕತೆ
ಡ] ಮಾರುಕಟ್ಟೆ
ಮೊದಲನೆಯದಾಗಿ 'ವಿಷಯ' ದ ವಿಷಯಕ್ಕೆ ಬರೋಣ. ಇಂದಿನ ನಮ್ಮ ಸಿನೆಮಾಗಳಲ್ಲಿ ಬಹುಪಾಲು ಸಿನೆಮಾ ಮನರಂಜನೆ ಗೆ ಪೂರಕವಾಗುವಂಥ ವಿಷಯಗಳುಳ್ಳ ಚಿತ್ರಗಳೇ ತುಂಬಿವೆ. ಇಂದು ಹುಟ್ಟುತ್ತಿರುವ ಫಾರ್ಮ್ಯುಲಾ ಚಲನಚಿತ್ರಗಳಿಗೆ ಪರ್ಯಾಯವಾಗಿ ಎಂತಹ ಸಿನೆಮಾ ಮಾಡಬಹುದು. ವಿಷಯದ ವೈವಿಧ್ಯತೆ ಏನು ಕಡಿಮೆಯೇ? ಪ್ರತಿ ವರ್ಷ ಇಂತಿಷ್ಟು ಎಂದು ಬೇರೆ ಬೇರೆ ವಿಷಯಗಳ ಮೇಲೆ ಚಲನಚಿತ್ರಗಳನ್ನು ಮಾಡಬಹುದು. ಫ್ಯಾಮಿಲಿ, ಸಾಹಸ, ಹಾಸ್ಯ, ಸಸ್ಪೆನ್ಸ್, ಹಾರರ್, ಲೈಂಗಿಕ, ವಿಡಂಬನೆ, ಸಾಮಾಜಿಕ, ಪೌರಾಣಿಕ, ಐತಿಹಾಸಿಕ, ಪ್ರಸ್ತುತ ಸಮಸ್ಯೆಗಳು, ಈ ಹಿಂದೆ ಘಟಿಸಿದ ಕಥೆಗಳನ್ನು ಬಳಸಿ, ದೇಶಭಕ್ತಿ, ಕ್ರಾಂತಿ ಹೀಗೆ ಹಲವಾರು ವಿಷಯಗಳ ಮೇಲೆ ಸಿನೆಮಾಗಳನ್ನು ಮಾಡಬಹುದು.
ಕಲಾತ್ಮಕ ಚಿತ್ರಗಳ ಪಾತ್ರ ಇಲ್ಲಿ ಮುಖ್ಯವಾಗುತ್ತದೆ. ಕಲಾತ್ಮಕ ಚಿತ್ರಗಳು ಈ ಯಾವುದೇ ವಿಷಯಗಳ ಮೇಲೆ ಕ್ಷ-ಕಿರಣ ಬೀರುವುದಕ್ಕೆ ಹೆಚ್ಚು ಪರಿಣಾಮಕಾರಿಯಾಗುವುದರಲ್ಲಿ ಸಂಶಯವಿಲ್ಲ. ಡಾಕ್ಯುಮೆಂಟರಿಗಳಂತಹ ಸಿನೆಮಾಗಳು ಕಲಿಕೆಗೆ ಸಹಕಾರಿಯಾಗುತ್ತವೆ.
ಸಾಹಿತ್ಯ ಲೋಕದ ನೆರವಿನಿಂದ ಕಥೆ ಕಾದಂಬರಿ ಹೆಕ್ಕಿ ಸಿನೆಮಾಗಳಿಗೆ ಅಳವಡಿಸುವ ಕಾರ್ಯ ಈಗಾಗಲೇ ಆಗಿದೆ, ಆಗುತ್ತಿದೆ. ಇತ್ತೀಚಿನಲ್ಲಿ ಹಿಂದಿಯ 'ದಸ್ ಕಹಾನಿಯಾಂ' ಇಂತಹ ಒಂದು ಒಳ್ಳೆಯ ಪರ್ಯಾಯ ಸಿನೆಮಾ ಪ್ರಯತ್ನ ಎನಬಹುದು.
ಎರಡನೆಯದಾಗಿ ಸಿನೆಮಾ ಅವಧಿ. ಕ್ರಿಕೆಟ್ ನ ವಿವಿಧ ರೂಪಗಳಂತೆ ಸಿನೆಮಾವನ್ನು ಕೂಡ ಬಗೆಬಗೆಯ ಸ್ತರದಲ್ಲಿ ಸಮಯ ವ್ಯಯಿಸಬಲ್ಲ ಪ್ರೇಕ್ಷಕನಿಗೆ ಬೇರೆಬೇರೆ ಪ್ಯಾಕೇಜುಗಳಲ್ಲಿ ವೈವಿಧ್ಯಮಯ ಸಿನೆಮಾ ನೀಡುವುದು ಪರ್ಯಾಯ ಸಿನೆಮಾಕ್ಕೆ ಇನ್ನೊಂದು ದಾರಿ ತೋರಿಸಬಹುದು. ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಸಾರ್ವಕಾಲಿಕ ೨ ಗಂಟೆ ೩೦ ನಿಮಿಷದ ಕಟ್ಟಳೆಯನ್ನು ಮುರಿದು ಈಗಾಗಲೆ ಕೆಲವು ಪ್ರಯತ್ನಗಳು ನಡೆದಿದ್ದರೂ, ಇದೊಂದು ಪೂರ್ಣ ಪ್ರಮಾಣದ ಪರ್ಯಾಯವಾಗಿ ಬೆಳೆದಿಲ್ಲ. ೩೦ ನಿಮಿಷ, ೧ ಗಂಟೆ, ೯೦ ನಿಮಿಷ, ೨ ಗಂಟೆ ಹೀಗೆ ಬೇರೆ ಬೇರೆ ಸಮಯದ ಉದ್ದವುಳ್ಳ ಚಲನಚಿತ್ರಗಳನ್ನು ನಿರ್ಮಿಸಬಹುದು. ಇದು ಪರ್ಯಾಯ ಸಿನೆಮಾಕ್ಕೆ ಪ್ರಮುಖ ಅಸ್ತ್ರವಾಗಬಹುದು. ಪಿ.ವಿ.ಆರ್ ನಂತಹ ಚಿತ್ರ ಪ್ರದರ್ಶಕರು ದಿನದ ನಾಲ್ಕು ಪ್ರದರ್ಶನಗಳ ಸಂಪ್ರದಾಯವನ್ನು ಈಗಾಗಲೇ ಮುರಿದಿದ್ದಾರೆ. ಆದರೆ ನಿಯಮಿತ ಚಲನಚಿತ್ರ ಗೃಹಗಳಿಗೆ ಈ ಸಮಯದ ಮಾರ್ಪಾಡು ಮಾಡಲಾಗಿಲ್ಲ. ಅದಕ್ಕೆ ಈ ೨ ಗಂಟೆ ೩೦ ನಿಮಿಷವೆಂಬ ಲಕ್ಷ್ಮಣ ರೇಖೆಯೇ ಕಾರಣ.
೩೦ ನಿಮಿಷದ ಒಂದು ಚಿತ್ರ, ೧ ಗಂಟೆಯ ಎರಡು ಚಿತ್ರ , ೨ ಗಂಟೆ ೩೦ ನಿಮಿಷದ ಒಂದು ಚಿತ್ರ ಹೀಗೆ ಇವತ್ತಿನ ಎರಡು ಶೋ ವೇಳೆಯಲ್ಲಿ ನಾಲ್ಕು ಪ್ರದರ್ಶನಗಳಾದವು ! ಅದೂ ವಿವಿಧ ರೀತಿಯ ಸಿನೆಮಾಗಳು !! ಅಂದರೆ ಒಂದೇ ಚಿತ್ರಮಂದಿರ ವಿವಿಧ ರೀತಿಯ ಪ್ರೇಕ್ಷಕ ವರ್ಗಕ್ಕೆ ವೇದಿಕೆಯೊದಗಿಸಿಕೊಟ್ಟಂತಾಯಿತು. ಇದು ಈಗಿನಂತೆ 'ಬಿ' ಗ್ರೇಡ ಚಿತ್ರಮಂದಿರ, 'ಹಳೆಯ' ಸಿನಿಮಾಗಳ ಚಿತ್ರಮಂದಿರ ಎಂಬ ಲೆಬೆಲ್ಲುಗಳೆಲ್ಲ ಕಿತ್ತೊಗೆಯಬಹುದು. ಪ್ರೇಕ್ಷಕನೂ ತನ್ನಲ್ಲಿರುವ ಬಿಡುವಿಗನುಸಾರವಾಗಿ ಸಮಯ ವ್ಯಯಿಸಬಲ್ಲ. ಇಂದು 'ಬೀಜಿ' ಎಂದು ಹೇಳಿ ಮನೆಯಲ್ಲಿ ಸಿ.ಡಿ ಹಾಕಿಕೊಂಡು ನೋಡುವುದನ್ನು ತಪ್ಪಿಸಿ ಪ್ರೇಕ್ಷಕನನ್ನು ಥಿಯೇಟರ್ ಗೆ ಸೆಳೆಯಬಹುದು.
ಮೂರನೆಯದಾಗಿ ತಾಂತ್ರಿಕತೆಯ ವಿಭಾಗಕ್ಕೆ ಪರ್ಯಾಯಗಳ ಬಗ್ಗೆ ಗಮನ ಹರಿಸೋಣ. ಈಗಿರುವಂತೆ ಬರೀ ಕಲರ್ ಸಿನೆಮಾಗಳ ಬದಲಾಗಿ ಕಪ್ಪು/ಬಿಳುಪು, ಕಪ್ಪು/ಕಲರ/ಬಿಳುಪು ಸಿನೆಮಾ ಮಾಡಿದರೆ ಹೇಗೆ?! ಒಂದು ರೆಗ್ಯುಲರ್ ರೂಟೀನಿನಂತಹ ಅಭ್ಯಾಸವನ್ನು ಮುರಿದಹಾಗಾಗುತ್ತದೆ. ಅದೇ ಪ್ರೇಕ್ಷಕರನ್ನು ಸೆಳೆಯುವುದರಲ್ಲಿ ಸಹಕಾರಿಯಾಗುತ್ತದೆ. ಅಷ್ಟೇ ಅಲ್ಲ ಬೇರೆ ಬೇರೆ ತಾಂತ್ರಿಕ ಜ್ಞಾನವುಳ್ಳವರ ಅವಶ್ಯಕತೆಯೂ ಉದ್ಯಮಕ್ಕೆ ಬೇಕಾಗುತ್ತದೆ. ಈ ತರಹ ಬಣ್ಣಗಳೊಂದಿಗೆ ಆಡುವುದು ವಿಷಯಾಕ್ಕನುಗುಣವಾಗಿ ಚಲನಚಿತ್ರ ನಿರ್ಮಿಸುವವರಿಗೂ ಪೂರಕವಾಗಬಲ್ಲದು. ಇತಿಹಾಸವನ್ನು ಕಲರ್ ನಲ್ಲಿ ತೋರಿಸಿದಂತೆ, ಇಂದಿನ ಜೀವನಶೈಲಿಯನ್ನು ಕಪ್ಪು/ಬಿಳುಪಿಗೆ ಅಳವಡಿಸಿದರೆ ಎಷ್ಟೊಂದು ಮೋಜಲ್ಲವೇ ! ಬಣ್ಣದ ತಾಂತ್ರಿಕತೆಯಲ್ಲೇ ಮೂರು ವಿಧದ ಪರ್ಯಾಯ ಸಿನೆಮಾ ಪ್ರಯತ್ನಿಸಬಹುದು; ಕಲರ್, ಕಪ್ಪು/ಬಿಳುಪು, ಕಪ್ಪು/ಕಲರ್/ಬಿಳುಪು. ಏನಂತೀರಿ?
ತಾಂತ್ರಿಕತೆಯ ಇನ್ನೊಂದು ವಿಭಾಗಕ್ಕೆ ಬರೋಣ. ಅದು ಮೂಕಿ - ಟಾಕಿ. ಇಂದು ಎಲ್ಲ ಸಿನೆಮಾಗಳೂ ಟಾಕಿ ಚಿತ್ರಗಳು. ಸಮಯಕ್ಕೆ ವಿರುದ್ಧವಾಗಿ ಚಲಿಸಿಯೂ ಪರ್ಯಾಯ ಸಿನೆಮಾಗೆ ದಾರಿ ಕಂಡುಕೊಳ್ಳಬಹುದಲ್ಲವೇ? ಮೂಕಿ ಚಿತ್ರಗಳನ್ನು ಮಾಡಿದರೆ ಹೇಗೆ? ಇದು ಲಘು ಹಾಸ್ಯ ವಿಡಂಬನೆಯುಳ್ಳ ಸಂದೇಶಾತ್ಮಕ ಚಾಪ್ಲೀನ್ ನಿರ್ಮಿಸಿದ ಚಿತ್ರಗಳಂಥವುಗಳು. ಇಂಥದ್ದೊಂದು ಪರ್ಯಾಯ ಸಿನೆಮಾ ಪ್ರಯತ್ನದ ಅವಶ್ಯಕತೆ ಕನ್ನಡ ಚಿತ್ರಜಗತ್ತಿಗೆ ತುಂಬಾ ಇದೆ.
ತಾಂತ್ರಿಕತೆಯ ಮಗದೊಂದು ಒಳ್ಳೆಯ ಪರ್ಯಾಯ 'ಆನಿಮೇಷನ್'. ಕನ್ನಡದಲ್ಲಿ ಆನಿಮೇಷನ್ ಚಿತ್ರಗಳ ನಿರ್ಮಾಣ ಚಿಕ್ಕಮಕ್ಕಳ ಪ್ರೇಕ್ಷಕಗಣವನ್ನು ಹೆಚ್ಚಿಸುವುದಲ್ಲದೇ, ಇಂತಹ ಚಿತ್ರಗಳಿಗೆಂದೇ ಡಬ್ಬಿಂಗ್ ಪಾತ್ರಗಳೂ ಹುಟ್ಟಬಹುದು. ಆನಿಮೇಷನ ಚಿತ್ರಗಳಿಂದ ಸೃಜನಶೀಲತೆಗೆ ಹೆಚ್ಚೆಚ್ಚು ಅವಕಾಶ ಸಿಗುತ್ತದೆ. ಇದು ಇನ್ನೂ ಹೆಚ್ಚಿನ ಸೃಜನಶೀಲತೆ ಮಕ್ಕಳಲ್ಲಿ ಬೆಳೆಸುವಲ್ಲಿ ಸಹಕಾರಿಯಾಗುತ್ತದೆ.
ಇನ್ನು 'ಸಿಕ್ವೆಲ್' ಸಿನೆಮಾಗಳು. ಅಂತ, ಆಪರೇಷನ ಅಂತ ಹಾಗೂ ಇನ್ನು ಕೆಲವು ಸಿಕ್ವೆಲ್ ಸಿನೆಮಾಗಳನ್ನು ಹೊರತುಪಡಿಸಿದರೆ ನಮ್ಮ ಕನ್ನಡ ಚಲನಚಿತ್ರ ಉದ್ದಿಮೆಯಲ್ಲಿ ಇವುಗಳು ಅಪರೂಪ ಎಂದೇ ಹೇಳಬಹುದು. ಸಿಕ್ವೆಲ್ ಗಳು ಪರ್ಯಾಯ ಸಿನೆಮಾಗಳಿಗೆ ಮತ್ತೊಂದು ಪರಿಹಾರವಾಗಬಹುದು.
ಏನೇ ಪರ್ಯಾಯ ಸಿನೆಮಾ ಅಂತ ಬಡಕೊಂಡರೂ ಬಡ್ಜೆಟ್ಟು ಬೇಕೆ ಬೇಕು ತಾನೆ? ಹಾಗಾದರೆ ಸಿನೆಮಾ ಬಡ್ಜೆಟ್ಟು, ಪ್ರದರ್ಶನ ಮತ್ತು ವಿತರಣೆ ಕುರಿತು ಚರ್ಚಿಸೋಣ.
ಇಂದು ಬರೀ ದೊಡ್ಡ ಬಡ್ಜೆಟ್ಟ್ ನ ಚಿತ್ರಗಳನ್ನೇ ನಿರ್ಮಿಸಬೇಕೆನ್ನುವುದು ಹುಚ್ಚುತನ. ವಿಷಯ, ಪ್ರೇಕ್ಷಕ ವರ್ಗ, ಭಾಷೆಯಿಂದಾಗಿ ವಿತರಣೆಯ ಲಿಮಿಟ್ಟುಗಳನ್ನು ಅರ್ಥ ಮಾಡಿಕೊಂಡು ಬೇರೆ ಬೇರೆ ಬಡ್ಜೆಟ್ಟ್ ನ ಚಲನಚಿತ್ರಗಳನ್ನು ನಿರ್ಮಿಸುವಂತಾದರೆ ಇಂದಿನ ಸಿನೆಮಾಗಳಿಗೆ ಪರ್ಯಾಯ ತಾನಾಗಿಯೇ ರೂಪಗೊಳ್ಳುತ್ತದೆ. ಬಡ್ಜೆಟ್ಟನ್ನು ಐದು ರೀತಿಯಲ್ಲಿ ವಿಭಾಗೀಕರಿಸಬಹುದು;
ಕಡಿಮೆ ಬಡ್ಜೆಟ್ಟು, ಮಧ್ಯಮ ಬಡ್ಜೆಟ್ಟ್, ದೊಡ್ಡ ಬಡ್ಜೆಟ್ಟ್, ಬೃಹತ್ ಮತ್ತು ಪ್ರಾಯೋಗಿಕ ಬಡ್ಜೆಟ್ಟ್. ಇಲ್ಲಿ ಪ್ರಾಯೋಗಿಕ ಬಡ್ಜೆಟ್ಟೆಂಬುದು ಇವುಗಳಲ್ಲಿಯಾವುದಾದರ ಮಿಶ್ರಣವಾಗಿರಬಹುದು.
ನಿರ್ಮಾಣದಲ್ಲಿ ಪರ್ಯಾಯ ಹೇಗೆ?: ಈಗಾಗಲೇ ಸಿನೆಮಾ ನಿರ್ಮಾಣದಲ್ಲಿ ಮಹತ್ತರ ಪರ್ಯಾಯಗಳು ಉದ್ಭವಿಸಿವೆ. ಸಾಯಿಮಿರಾ ಪಿರಾಮಿಡ, ಯು.ಟಿ.ವಿ, ರಿಲಾಯನ್ಸ್ ನಂತಹ ಭಾರಿ ಉದ್ದಿಮೆದಾರರು ಮೆಗಾ ಪ್ರಾಜೆಕ್ಟಗಳಿಗೆ ಮತ್ತು ಪ್ರಾಯೋಗಿಕ ಸಿನೆಮಾಗಳಿಗೆ ದುಡ್ಡು ಸುರಿಯುತ್ತಿದ್ದಾರೆ. ಹಿಂದಿನಂತೆ ಕೆಲವೇ ವ್ಯಕ್ತಿಗಳ ನಿರ್ಮಾಪಣೆಯಲ್ಲಿ ಈಗ ಸಿನೆಮಾಗಳು ತಯಾರಾಗುತ್ತಿಲ್ಲ. ಇಂದು ಅದು ಕಾರ್ಪೋರ್‍ಏಟ್ ವೇಷ ಪಡೆದುಕೊಂಡಿದೆ. ಇಲ್ಲಿ ಇನ್ನೂ ಒಂದು ಪರ್ಯಾಯ ಸಿನೆಮಾ ರಚಿಸುವಂತಹ ಅವಕಾಶವಿದೆ. ಈ ಮಧ್ಯಮ ಹಾಗೂ ಸಣ್ಣ ಬಡ್ಜೆಟ್ಟ್ ಸಿನೆಮಾಗಳಿಗೆ ಶೇರುಗಳನ್ನು ಮಾಡಿ ಪ್ರೇಕ್ಷಕರನ್ನೇ ಪಾಲುದಾರರನ್ನಾಗಿಸಿ ಚಿತ್ರ ನಿರ್ಮಾಣ ಮಾಡಬಹುದು. ಇಲ್ಲಾ, ಹಿಂದಿಯ ಕೆಲವು ಚಿತ್ರನಟರಂತೆ ಇಲ್ಲಿಯೂ ಕೇವಲ ನಟರಷ್ಟೇ ಅಲ್ಲ ಉಳಿದ ವಿಭಾಗದ ಜನರೂ ಪಾಲುದಾರರಾಗಿ ಪರ್ಯಾಯ ಸಿನಿಮಾಗಳನ್ನು ನಿರ್ಮಿಸಬಹುದು. ಅಷ್ಟೇ ಏಕೆ ಇನ್ನೊಂದು ಬಹುಮುಖ್ಯವಾದ ದಾರಿಯಿದೆ. ನಮ್ಮಲ್ಲಿರುವ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸಂಸ್ಥೆಗಳು, ಕಾರ್ಖಾನೆಗಳು ಕೂಡ ಪರ್ಯಾಯ ಸಿನೆಮಾಗಳಿಗೆ ಬಡ್ಜೆಟ್ಟ್ ರೂಪಿಸುವಲ್ಲಿ ಪಾತ್ರವಹಿಸಬಹುದು. ಉದಾಹರಣೆಗೆ, ಯಾವುದೋ ಒಂದು ಆರೋಗ್ಯ ಸಂಸ್ಠೆ ಒಂದು ಮಧ್ಯಮ ಬಡ್ಜೆಟ್ಟ್ ನ ಏಡ್ಸ್ ಕುರಿತಾದ ವೈಜ್ಞಾನಿಕ ಚಿತ್ರವನ್ನು ಮಾಡಿ ಅದರ ಪ್ರದರ್ಶನದಲ್ಲೆಲ್ಲ ತಮ್ಮದೇ ಆರೋಗ್ಯ ಸಂಸ್ಥೆಯ ಜಾಹಿರಾತುಗಳನ್ನು ನೀಡಬಹುದು. ಇಲ್ಲಿ ಲಾಭ ಒಂದು ಚಿತ್ರದಗಳಿಕೆಯಿಂದಲೂ ಆಗುವುದು ಅಷ್ಟೇ ಅಲ್ಲ ತಮ್ಮ ಆರೋಗ್ಯ ಸಂಸ್ಥೆಯ ಜಾಹಿರಾತು ಖರ್ಚನ್ನೂ ಉಳಿಸಿದ ಹಾಗಾಯ್ತು. ಶಿಕ್ಷಣ ಸಂಸ್ಥೆಗಳೂ ಉತ್ತಮ ಶೈಕ್ಷಣಿಕ ಮಾಹಿತಿ ಚಿತ್ರಗಳನ್ನು ನಿರ್ಮಿಸಿ ಶಿಕ್ಷಣವನ್ನು ಕನ್ನಡ ರೂಪದಲ್ಲಿ ತಂದ ಹಾಗೂ ಆಯಿತು, ಲಾಭಗಳಿಸಿ ತಮ್ಮ ಶಿಕ್ಷಣ ಸಂಸ್ಥೆಯ ಜಾಹಿರಾತು ಮಾಡಿದ ಹಾಗೂ ಆಗುತ್ತದೆ.
ಪ್ರದರ್ಶನದ ಬಗ್ಗೆ ಈಗಾಗಲೇ ಹಿಂದೆ ಒಂದೆರಡು ಪರ್ಯಾಯಗಳನ್ನು ಸೂಚಿಸಿದ್ದೇನೆ. ಇಲ್ಲಿ ಮತ್ತೊಂದು ದಾರಿಯೂ ಕಾಣಿಸುತ್ತಿದೆ. ಬಡ್ಜೆಟ್ಟ್ ಗನುಸಾರವಾಗಿ ಪ್ರದರ್ಶನವನ್ನು ಹಮ್ಮಿಕೊಳ್ಳುವ ಜಾಣ್ಮೆಯ ಪರ್ಯಾಯ. ಇದಕ್ಕೊಂದು ಒಳ್ಳೆಯ ಉದಾಹರಣೆ ಇತ್ತೀಚಿಗೆ ನಾನು ನೋಡಿದ 'ನಂಪ್ರೀತಿ' ಎಂಬ ಕಿರು ಚಿತ್ರ. ೨೦ ನಿಮಿಷಾವಧಿಯ ಅತೀ ಕಡಿಮೆ ಬಡ್ಜೆಟ್ಟ್ ನಲ್ಲಿ ಚಿತ್ರವನ್ನು ತಯಾರಿಸಿ ಸುಚಿತ್ರಾ ಫಿಲ್ಮ್ ನಲ್ಲಿ ಪ್ರದರ್ಶಿಸಿದ್ದರು. ಹಾಗೆಯೇ ಆಯ್ದ ಕರ್ನಾಟಕದ ಊರುಗಳಲ್ಲಿಯೂ ಪ್ರದರ್ಶಿಸಿದರು.
'ಮಾರ್ಕೆಟ್ಟು ಇಲ್ಲಾ' ಎಂದು ಕೂರುವವರಿಗೆ ಒಂದು ಹಳೆಯ ಮ್ಯಾನೇಜಮೆಂಟ ಉದಾಹರಣೆ ಕೊಡುವೆ. ನಿಜವೋ ಸುಳ್ಳೋ ಅಂತೂ ಉದಾಹರಣೆಯಂತೂ ಯೋಚಿಸುವಂತೆ ಮಾಡುತ್ತದೆ. ಒಮ್ಮೆ ಬಾಟಾ ಕಂಪೆನಿಯವರು ತಮ್ಮ ಚಪ್ಪಲುಗಳನ್ನು ಮಾರಾಟ ಮಾಡಲೆಂದು ತಮ್ಮ ಮಾರ್ಕೆಟಿಂಗ ಸದಸ್ಯನನ್ನು ಆಫ್ರಿಕಾದ ಹಳ್ಳಿಗೆ ಕಳುಹಿಸುತ್ತಾರೆ. ಅಲ್ಲಿ ಹೋಗಿ ನೋಡಿದರೆ ಆ ಮಾರ್ಕೆಟಿಂಗ ಹುಡುಗನಿಗೆ ದಿಕ್ಕೇ ತೋಚುವುದಿಲ್ಲ. ಏಕೆಂದರೆ ಅಲ್ಲಿಯ ಜನ ಎಕ್ಕಡವನ್ನು ಹಾಕಿಕೊಳ್ಳುವುದೇ ಇಲ್ಲ. ಅಸಹಾಯಕನಾಗಿ ಅವನು ಮರಳುತ್ತಾನೆ. ಒಂದು ತಿಂಗಳಿನ ನಂತರ ಸಂಸ್ಥೆ ಮತ್ತೊಮ್ಮೆ ಅಲ್ಲಿಗೆ ಹೊಸ ಮಾರ್ಕೆಟಿಂಗ ಹುಡುಗನನ್ನು ರವಾನಿಸುತ್ತಾರೆ. ಹೋದ ಕೂಡಲೇ ಅವನು ಅಲ್ಲಿಯ ಪರಿಸ್ಥಿಯನ್ನು ಅರಿತು ಖುಶಿಯಿಂದ ಕೂಡಲೇ ತನ್ನ ಬಾಟಾ ಕಂಪೆನಿಯ ಮ್ಯಾನೇಜರ್ ಗೆ ಕಡಿಮೆ ಎಂದರೂ ಮೂರು ಟ್ರಕ್ ಚಪ್ಪಲು ಕಳುಹಿಸುವಂತೆ ಕರೆ ಮಾಡುತ್ತಾನೆ. ಮ್ಯಾನೇಜರ್ ಕೇಳಲು 'ಇಲ್ಲಿಯ ಇನ್ಯಾವುದೇ ಚಪ್ಪಲ ಕಂಪೆನಿಯವರು ತಲುಪಿಲ್ಲ, ಒಬ್ಬನೂ ಚಪ್ಪಲು ಹಾಕಿಕೊಂಡಿಲ್ಲ, ಅಂದರೆ ನಾನು ಇಡೀ ಈ ಊರಿನ ಜನರಿಗೆ ಚಪ್ಪಲು ಮಾರಬಹುದು' ಎನ್ನುತ್ತಾನೆ.
ಇಂದು ನಮ್ಮ ಕನ್ನಡ ಚಲನಚಿತ್ರ ಉದ್ದಿಮೆಯಲ್ಲಿ ಸಾಕಷ್ಟು ಪರ್ಯಾಯ ಸಿನೆಮಾಗಳಿಗೆ ಅವಕಾಶವಿದೆ. ಮಾರುಕಟ್ಟೆ ಎನ್ನುವುದು ನಾವು ನಿರ್ಮಿಸಿದ ಹಾಗೆ. ಹೀಗಾಗಿ ಪರ್ಯಾಯ ಸಿನೆಮಾಗೆ ಅನೇಕ ದಾರಿಗಳಿವೆ. ಅವುಗಳನ್ನು ಕಂಡುಕೊಳ್ಳೋದು ಪ್ರಯತ್ನಿಸೋದು ನಮ್ಮ ಗುರಿಯಾಗಬೇಕಿದೆ.
---- ಎಮ್. ಡಿ
Tuesday, October 07, 2008
ತಾಯಿ ಭಾರತಾಂಬೆ...
ನಾನು ಭಾರತಿ
ಸಿಂಧುವಿನ ಮಗಳು
ತವರೂರು ಬಿಟ್ಟು ಬಂದೆ
ಋಷಿಮುನಿಗಳ ಸೊಸೆಯಾಗಿ
ಭರತ ಕುಲದ ಒಡತಿಯಾಗಿ
ಹಿಂದೂ ಸಾಗರದಿ ಕಾಲ್ತೊಳೆದಾಗ
ಕುವರಿ ಕನ್ಯೆ ನಾ
ಚಾಚಿದ ಎಡ ತೋಳಿಗೆ
ಹಿಮದ ಸೆರಗಿನ ಹೊದಿಕೆ
ಹೊಟ್ಟೆಯ ಬಲಕ್ಕೆ ಉಸುಕಿನ ಮಚ್ಚೆ
ಪ್ರೀತಿ ತುಂಬಿದ ಎದೆಯಲಿ
ಅಧಿಕಾರದ ಹಚ್ಚೆ
ಅರಿಷಿಣ ಬಳಿದ ಮುಂಗುರುಳು ತೂಗಿದ
ನೀಳ ನಾಸಿಕದ ಸೃಷ್ಟಿಯ ಅದ್ಭುತ
ಸೌಂದರ್ಯದ ಖನಿ
ನಾ ಭರತನ ಪತ್ನಿ
ಕೇಸರಿ ಬಿಳಿ ಹಸಿರು ಬಣ್ಣದ ಸೀರೆ
ಹಣೆಗೆ ಚಕ್ರದ ಕುಂಕುಮ
ನೂರು ಕೋಟಿ ಮಕ್ಕಳ ವಾತ್ಸಲ್ಯ
ಆಶೀರ್ವದಿಸಲು ಮುಕ್ಕೋಟಿ ದೇವರು
ಕಳೆದುಹೋಯಿತು ಎಲ್ಲಾ
ರಕ್ತದೋಕುಳಿ ಒಡಲೆಲ್ಲ
ಒಬ್ಬ ಹೇಳಿದ
ಕೆಂಪು ಬಣ್ಣದಾಗಿರಲಿಲ್ಲ ನೆತ್ತರು ಮೊದಲು
ಬೆರೆಸು ವಿಷ ಹಸಿರಾಗಿಸು ಅದನ್ನ
ಇನ್ನೊಬ್ಬ ಹೇಳಿದ
ನನ್ನೊಡಲಲ್ಲಿ ಬೆಳೆವ
ಬೆಳೆ ಹಸಿರಾಗಿರಲಿಲ್ಲ ಮೊದಲು
ಚೆಲ್ಲು ರಕ್ತವನ್ನ ಕೆಂಪಾಗಿಸು ಅದನ್ನ
ಮಗದೊಬ್ಬ ಕೇಳಿದ
ನಾನುಟ್ಟ ಸೀರೆ
ಕೆಂಪಾಗಿತ್ತೇ ಈ ಮೊದಲು?
ಕೇಳದೇ ಬಿಳಿ ಬಣ್ಣ ಚೆಲ್ಲಿ ವಿಧವೆಯಾಗಿಸಿದ ನನ್ನ
ಏನಾಗಬೇಕೆಂದಿದ್ದೆ ನಾನು
ಏನಾಗಿ ಹೋದೆ
ಶಾಂತಿಯ ಜ್ಯೋತಿ ಬೆಳಗಲು ಹೋಗಿ
ನಾನೇ ಉರಿದು ಶವವಾದೆ
ಪ್ರಕೃತಿಯ 'ಹಸಿರು' ತಿಂದರೂ
ನನ್ನ ಮೈಯಲ್ಲಿ ಹರಿವುದು 'ಕೆಂಪು' ರಕ್ತವೇ...
ನರನಾಡಿಯಲ್ಲಿ ಹರಿದದ್ದು ನೆತ್ತರು ಕೆಂಪದಾಗಿದ್ದರೂ
ಎದೆಯಲ್ಲಿ ಹುಟ್ಟಿದುದು 'ಬಿಳಿ' ಬಣ್ಣದ ಹಾಲೇ...
ಯಾಕೀ ಭೇದ-ಭಾವ ನಿಮಗೆ
ಬದುಕಲು ಬಿಡಿ ಈ ದೇಹದೊಂದಿಗೆ ನನಗೆ
ಹುಟ್ಟಿದ ಋಣವ ನೀವು ತೀರಿಸದಿದ್ದರೂ ಸರಿಯೇ
ನನ್ನ ಸುಟ್ಟು ಹಂಚಿ ತಿನ್ನುವುದು ಸರಿಯೇ?
ಬೆಳಕಾಗಬೇಕು ನಾ
ಸಪ್ತವರ್ಣಗಳನ್ನೊಳಗೊಂಡ ಬೆಳಕು
ಅಜ್ಞಾನದ ಕತ್ತಲನೋಡಿಸುವ ಬೆಳಕು
ತಪ್ಪಿದವರಿಗೆ ದಾರಿ ತೋರುವ ಬೆಳಕು
ದ್ವೇಷವನ್ನು ತೊಡೆವ ಪ್ರೀತಿಯ ಬೆಳಕು
ಶಾಂತಿಯ ದ್ಯೋತಕದ ಬೆಳಕು
ಬೆಳಗಲು ಬಿಡಿ ನನ್ನ
ಚಿತ್ರ ಕೃಪೆ: www.baesystems.com
Thursday, September 25, 2008
ಸಿಹಿ ಗಾಳಿ...
ಆತ್ಮೀಯ ಓದುಗ ಗೆಳೆಯರೆ,
ಒಂದು ಚಿಕ್ಕ ಸಂತೋಷ ನಿಮ್ಮೊಂದಿಗೆ ಹಂಚಿಕೊಳ್ಳಲು ಈ ಬರಹ.
ನನ್ನ ಸಣ್ಣ ಕಥೆ "ಬೆಳ್ಳಕ್ಕಿ" ಅಕ್ಕ-೨೦೦೮ ವಾರ್ಷಿಕ ಸಂಚಿಕೆಗೆ ಆಯ್ಕೆಯಾಗಿದೆ.
http://www.akkaonline.org/2008/documents/Souvenir_Articles_Listing.pdf
ನನ್ನ ಹಿರಿಯ ಗೆಳೆಯರೊಬ್ಬರು 'ಅಕ್ಕ' ಸ್ಪರ್ಧೆಗೆ ನನಗೆ ಕಥೆ ಕಳುಹಿಸಲು ಹೇಳಿದಾಗ ನಾನು 'ಅಯ್ಯೋ ನಾನಿನ್ನೂ ಆ ಮಟ್ಟಿಗೆ ಬರೆಯುವುದನ್ನು ಕಲಿತಿಲ್ಲ ಸಾರ್' ಎಂದಿದ್ದೆ. ಆದರೆ ಇಂದು ನನ್ನ ಬರವಣಿಗೆ ವಾರ್ಷಿಕ ಸಂಚಿಕೆಗೆ ಆಯ್ಕೆಯಾಗಿದೆ (ಸ್ಪರ್ಧೆಯಲ್ಲೇನೂ ಗೆದ್ದಿಲ್ಲ) ಎಂದರೇನೆ ನನ್ನಲ್ಲಿನ ಬರೆಯುವ ಆತ್ಮ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. "ಓಹ್, ನಾನೂ ಬರವಣಿಗೆಯನ್ನು ಸೀರಿಯಸ್ ಆಗಿ ತಗೋಬಹುದಲ್ಲಾ" ಅಂತ ಯೋಚಿಸುವಂತೆ ಮಾಡಿದೆ.
ನನ್ನ ಈ ಬರವಣಿಗೆಯ ಹವ್ಯಾಸವನ್ನು ಬೆಳೆಸಿದ್ದಕ್ಕೆ ಮತ್ತು ನಿಮ್ಮ ಸಲಹೆಗಳನ್ನು, ಪ್ರೋತ್ಸಾಹವನ್ನು ನೀಡುತ್ತ ನಾನು ಆಗಾಗ ಬರೆಯುತ್ತಾ ಇರುವಂತೆ ನೋಡಿಕೊಂಡ ಪ್ರೀತಿಯ ಓದುಗ ಮಿತ್ರರು ನೀವೆಲ್ಲ. ನಿಮ್ಮೆಲ್ಲರಿಗೆ ಧನ್ಯವಾದ ಹೇಳದೇ ಹೇಗಿರಲಿ....
Monday, September 15, 2008
ಆಶ್ವಾಸನೆ
ಚಳುವಳಿಗಾರ ನಾನು
ಪ್ರಖ್ಯಾತ ಹೋರಾಟಗಾರ
ಆಶ್ವಾಸನೆಗಳ ವಿರುದ್ಧ ಹೋರಾಟ ನನ್ನದು
'ನಾಳೆ' ಮರಳಿಸುವೆ ನಿನ್ನ ಸಾಲವನ್ನು
ಎನ್ನುವ ಸಾಲಗಾರನ ವಿರುದ್ಧ
ನನ್ನ ಹೋರಾಟ,
ಸಾಲದ ತೀರಿಸದಕ್ಕೋ ಇಲ್ಲವೇ ಸಾಲಗಾರನ ಸುಳ್ಳಿನ ವಿರುದ್ಧವಲ್ಲ ಅದು
ಅವನು ನೀಡುವ 'ಆಶ್ವಾಸನೆ'ಗೆ ವಿರೋಧ ನನ್ನದು
'ನಾಳೆ' ಬನ್ನಿ ಮುಗಿಸಿಬಿಡೋಣ
ನಿಮ್ಮ ಕೆಲಸವನ್ನು
ಎನ್ನುವ ಸರ್ಕಾರಿ ನೌಕರನ ವಿರುದ್ಧ
ನನ್ನ ಆರ್ಭಟ,
ಕೆಲಸವಾಗದಿರುವುದಕ್ಕೋ ಅಥವಾ ಆ ನೌಕರನ ಸುಳ್ಳಿನ ವಿರುದ್ಧವಲ್ಲ ಅದು
ಅವನು ನೀಡುವ 'ಆಶ್ವಾಸನೆ'ಗೆ ವಿರೋಧ ನನ್ನದು
'ನಾಳೆ' ವಿಚಾರಣೆಯಲ್ಲಿ
ಕೊನೆಗೊಳ್ಳುತ್ತೆ ನಿಮ್ಮ ಕೇಸು
ಎನ್ನುವ ವಕೀಲನ ವಿರುದ್ಧ
ನನ್ನ ರೌರವಾಟ,
ಕೇಸು ಸೋಲುವ ಅಂಜಿಕೆಯಿಂದಲೋ ಇಲ್ಲಾ ಆ ವಕೀಲನ ಸುಳ್ಳಿನ ವಿರುದ್ಧವಲ್ಲ ಅದು
ಅವನು ನೀಡುವ 'ಆಶ್ವಾಸನೆ'ಗೆ ವಿರೋಧ ನನ್ನದು
'ನಾಳೆ' ಈ ದೇಶದ
ಗತಿಯನ್ನೇ ಬದಲಿಸೋಣ
ಎನ್ನುವ ರಾಜಕಾರಣಿಯ ವಿರುದ್ಧ
ನನ್ನ ಕೆಣಕಾಟ,
ದೇಶದ ಗತಿ ಬದಲಾಗದಿರುವುದಕ್ಕೋ, ರಾಜಕಾರಣಿಯ ಸುಳ್ಳಿನ ವಿರುದ್ಧವೋ ಅಲ್ಲ ಅದು
ಅವನು ನೀಡುವ 'ಆಶ್ವಾಸನೆ'ಗೆ ವಿರೋಧ ನನ್ನದು
-
-
-
ಅಪ್ಪ 'ಅಮ್ಮ' ಯಾವಾಗ್ ಬರ್ತಾಳೆ?
ನೂರಾ ಆರನೇ ಸಲ ಕೇಳಿದಳು ಮಗಳು ನಿನ್ನೆಯಿಂದ
ಏಳನೇ ಸಲ ಕೇಳುವ ಮೊದಲೇ ಹೊರಟಿತ್ತು ಮಾತು ನನ್ನಿಂದ
'ನಾ..ಳೆ...'
'ನಾಳೆ... ಬರ್ತಾ...ಳೆ ಪುಟ್ಟಿ'
ಸೋತ ಹೋರಾಟಗಾರ
ತನ್ನದೇ ಹೋರಾಟದಲ್ಲಿ,
ಸತ್ತ ಚಳುವಳಿಗಾರ
ತಾನೇ ಹುಟ್ಟಿಸಿದ ಚಳುವಳಿಯಲ್ಲಿ
ಸುಳ್ಳೋ ನಿಜವೋ
ಆದರೂ 'ಆಶ್ವಾಸನೆ' ಕೊಡಲೇಬೇಕು
'ಇವತ್ತ'ನ್ನು ಸೋಲಿಸಲು
'ನಾಳೆ' ಗೆದ್ದರೆ ನನ್ನದು
ಸೋತರೆ???
ಇದೆಯಲ್ಲ 'ನಾಳೆ' ಎನ್ನುವ ಮತ್ತೊಂದು ಆಶ್ವಾಸನೆ
ಅದು ಸುಳ್ಳೇ ಆದರೂ..
ಎಷ್ಟಾದರೂ ಜೀವನವೇ ಮೋಕ್ಷವನ್ನು ಪಡೆಯಲು
ದೇವರು ಕೊಟ್ಟ ಒಂದು ಆಶ್ವಾಸನೆಯಲ್ಲವೇ?
ಸುಳ್ಳೋ ನಿಜವೋ
ಅವನು ನೀಡುವ 'ಆಶ್ವಾಸನೆ'ಗೆ ವಿರೋಧ ನನ್ನದು
ಚಿತ್ರ ಕೃಪೆ: www.photoshoptalent.com
Friday, September 05, 2008
ಬಾಯ್ಸ್ ಡೈರಿ - ೧ (ಪಾತ್ರ ಪರಿಚಯ)
ನಾನು, ಜ್ಯಾಕ್, ಮಲಿಕ್ ಮತ್ತು ಅಂಕಲ್ ವಿಜಯನಗರದಲ್ಲಿರುವ ಪಾರ್ಕ್ ವೀವ್ ಹೋಟೇಲಿನಲ್ಲಿ ಕುಳಿತಿದ್ದೇವೆ. ಟೆರೆಸ್ ಗಾರ್ಡನ್ ಬಾರ್ ಮತ್ತು ರೆಸ್ಟೋರಾಂಟ್ದಲ್ಲಿ ಬೆಂಗಳೂರಿನ ಹಿತವಾದ ಚಳಿಗೆ ಚಳಿ ಹಿಡಿಸಲು ಬೀಯರ್ ಹೀರುತ್ತ.
ಓಹ್, ಕ್ಷಮಿಸಿ ಪರಿಚಯವೇ ಮಾಡಿಸಲಿಲ್ವಲ್ಲ ನಿಮಗೆಲ್ಲಾ. ಹೀಯರ್ ಯು ಗೋ;
ಮೀಟ್ ಮಿ.ಅಂಕಲ್ ಅಂದ್ರೆ ಮಿ.ವೈಭವ್. ವೃತ್ತಿಯಿಂದ ಕೃಷಿಕ. ಬಿ.ಎಸ್ಸಿ. ಪದವೀಧರ (ಅದು ಹೇಗೆ ಪಾಸದನೋ ದೇವರಿಗೂ ತಿಳಿಯುತ್ತಿಲ್ಲ). ತಿಂಗಳಿಗೊಮ್ಮೆ ಬೆಂಗಳೂರಿನ ಆರ್.ಎಂ.ಸಿ ಯಾರ್ಡಗೆ ಭೇಟಿ. ಪೇಮೆಂಟ್ ಆದ ಕೂಡಲೇ ಗೆಳೆಯರಿಗೊಂದು ಕಾಲ್ ಮೀಟಿ ವಿಜಯನಗರದ ಪಾರ್ಕ್ ವೀವ್ ಗೆ ಧಾವಿಸುವ ಪಾರ್ಟಿ, ಬಿಲ್ಲಿನಲ್ಲಿ ಕೈಕೊಟ್ಟು ಹೋಗುವ ಸೋಡಾ ಚೀಟಿ. ಮಾತಿನಲ್ಲಿ ಗತ್ತಿನಲ್ಲಿ ವಿಚಾರಗಳಲ್ಲಿ ನಮ್ಮೆಲ್ಲರಿಗಿಂತ ಹತ್ತು ವರ್ಷ ಮುಂದೆ. ಅನುಭವ (!)ದ ವಿಚಾರದಲ್ಲಿ ಮಾತ್ರ ನಮಗಿಂತ ಇಪ್ಪತ್ತು ವರ್ಷ ಹಿಂದೆ. ಅದಕ್ಕೇ ಅವನನ್ನು ನಾವೆಲ್ಲ 'ಅಂಕಲ್' ಅನ್ನೋದು. ಗರ್ಲ್ ಫ್ರೆಂಡ್ಸ್ ಇಲ್ಲವೇ ಇಲ್ಲ, ಫ್ರೆಂಡ್ಸ್ ವ್ಹೂ ಆರ್ ಗರ್ಲ್ಸ್ ಅದೂ ಇಲ್ಲಾ. ಟೋಟಲಿ ಲೈಫ್ ಖಾಲಿ ಹಾಳೆ.
ನಮ್ಮ ಮುಂದಿನ ಪರಿಚಯ ಮಿ.ಮಲಿಕ್. ಮಲ್ಲಿಕಾರ್ಜುನಪ್ಪ ಶೆಟ್ಟರ್ ಎಂಬ ಹೆಸರು ಹಳೇಕಾಲದ್ದು ಅನಿಸುತ್ತದೆ ಅಂತ ಮೊದಲನೇ ಸಲ ಆನ್-ಸೈಟ್ ಗೆ ಹೋಗಿ ಬಂದ ನಂತರ ಗೊತ್ತಾಗಿ ಶಾರ್ಟ್ ಅಂಡ್ ಸ್ವೀಟ್ ಆಗಿ ಮಿ.ಮಲಿಕ್ ಆಗಿದ್ದಾರೆ. ವಿಪ್ರೋ ಸಾಫ್ಟವೇರ್ ಕಂಪೆನಿಯಲ್ಲಿ ಮಾರ್ಕೆಟಿಂಗ ಕೆಲಸ. ತಿಂಗಳಿಗೊಮ್ಮೆ ಭಾರತದ ವನವಾಸ. ಹೌದು, ವನವಾಸ ಅದೂ ಭಾರತದ್ದು. ಅಂದ್ರೆ ಗೊತ್ತಾಯ್ತಲ್ಲ ನಿಮಗೆ. ಗೊತ್ತಾಗ್ಲಿಲ್ವೇ, ಸರಿ ಹೇಳ್ತೀನಿ ಕೇಳಿ. ಇವರ ಪಾಸ್-ಪೋರ್‍ಟನಲ್ಲಿ ಕಾಂಬೋಡಿಯಾ, ಸೋಮಾಲಿಯಾ ಮತ್ತು ಅಪಘಾನಿಸ್ತಾನ್ ದೇಶಗಳನ್ನು ಬಿಟ್ಟು ಉಳಿದೆಲ್ಲ ದೇಶಗಳ ವೀಸಾ ಬಿದ್ದಿದೆ. ಕಂಪೆನಿಯ ಬ್ಯಾಡ್ ಲಕ್ಕೋ ಇವರ ಗುಡ್ ಲಕ್ಕೋ ಅಂತೂ ತಿಂಗಳಿಗೊಮ್ಮೆ ಒಂದೊಂದು ದೇಶದ ಪಯಣ. ಈ ಪಾರ್ಕ್ ವೀವ್ ನ ಖಾಯಂ ಸದಸ್ಯರು. ಬೀಯರ್ ನೀರಿಗಿಂತ ಮುಂಚೆ ಹುಟ್ಟಿದ್ದೆಂದು ಬಲವಾಗಿ ನಂಬಿದವರು. ಅದಕ್ಕೇ ನೀರನ್ನೂ ಕುಡಿಯೋ ಬದಲು ಬೀರೇ ಕುಡೀಬಹುದಲ್ಲ ಅನ್ನೋದು ಅವರ ಮನಸ್ಸಿನ ಉತ್ಕಟ ಅನಿಸಿಕೆ. ಅವರ ಫ್ರಿಡ್ಜಿನಲ್ಲಿ ಯಾವತ್ತಿಗೂ ಒಂದು ಕ್ರೇಟ್ ಕೆ.ಎಫ್. ಬೀಯರ್ ಕ್ಯಾನ್ ಖಾಯಂ ಠಿಕಾಣಿ ಹೂಡಿರುತ್ತವೆ. ನೀರಿನಿಂದ ಸ್ವಲ್ಪಾ ದೂರಾನೇ ಅನ್ನಿ. ಈ ವಾರ ಸ್ನಾನ ಆಯ್ತು ಅಂದ್ರೆ ಮುಂದಿನ ಸ್ನಾನ ಯಾವಾಗೋ ಅವರಿಗೇ ಗೊತ್ತಿರುವುದಿಲ್ಲ. ಹೇಗೂ ಬಾಡೀ ಸ್ಪ್ರೇ ಇರುತ್ತಲ್ಲ. ಅಂದ ಹಾಗೆ ಆಗಸ್ಟ್ ೧೫, ಜನೇವರಿ ೨೬ ಮತ್ತು ತಮ್ಮ ಹುಟ್ಟುಹಬ್ಬದ ದಿನ ಸ್ನಾನ ಮಾಡುವುದು ಅವರು ಮರೆಯುವುದಿಲ್ಲ. ಗರ್ಲ್ ಫ್ರೆಂಡ್ ಮಾಡಿಕೊಳ್ಳೇಕೆ ಟ್ರೈ ಮಾಡ್ತಾ ಇದಾರೆ; ಸುಮಾರು ೧೨ ವರ್ಷಗಳಿಂದ. ಇನ್ನೂ ಆಗಿಲ್ಲ. ಹಾಗೇನಾದರೂ ಅಪ್ಪಿ ತಪ್ಪಿ ಇವರಿಗೆ ಯಾರಾದ್ರೂ ಗರ್ಲ್ ಫ್ರೆಂಡ್ ಅಂತ ಆದ್ರೆ ನನ್ನಿಂದ ನಿಮಗೆಲ್ಲರಿಗೂ ಇದೇ ಗ್ರೀನ್ ವೀವ್ ಹೋಟೇಲಿನಲ್ಲಿ ಪಾರ್ಟಿ. ಫ್ರೆಂಡ್ಸ್ ವ್ಹೂ ಆರ್ ಗರ್ಲ್ಸ್ ಅದೂ ದೇಶಕ್ಕೊಂದಿದಾರೆ. ಅದಕ್ಕೆ ಮುಂದೆ ಹೆಜ್ಜೆ ಇಡೋಕೆ ಮುಂಚೇನೆ ಇವರು ಅಲ್ಲಿಂದ ಕಾಲ್ಕಿತ್ತು ಭಾರತಕ್ಕೋ ಇಲ್ಲ ಇನ್ಯಾವುದಾದರೂ ಪರದೇಶಕ್ಕೋ ಪ್ರಯಣ ಬೆಳೆಸಿರ್ತಾರೆ. ಸೊ ಐ ಆಲ್ ವೇಯ್ಸ್ ಸೇ ಟು ಹಿಮ್- ಇಟ್ ಟೇಕ್ಸ್ ಟೈಮ್ ಡೂಡ್.
ಇಷ್ಟೊತ್ತಿನಿಂದ ವಟಗುಟ್ಟುತ್ತಿರುವವನು ನಾನು. 'ನಾನು' ಅಂದ್ರೆ ಕವಿ, ಸಾಹಿತಿ, ಸಮಾಜ ಸೇವಕ, ಎಡಪಂಥೀಯ, ಬಲಪಂಥೀಯ, ಬುದ್ಧಿಜೀವಿ, ಸಂಗೀತಪ್ರೀಯ, ಲೈಂಗಿಕ ತಜ್ಞ, ನಿಶಾಚರಿ ಇತ್ಯಾದಿ ಇತ್ಯಾದಿ ಇನ್ನೂ ಏನೇನೋ. ಕೊನೆಗೆ ಎಲ್ಲಾ ಸೇರಿಸಿ ಹೇಳುವುದಾದರೆ ಅಪ್ಪಟ ನಿರುದ್ಯೋಗಿ. ಉಳಿದವರಿಗೆಲ್ಲ ಈಯರ್ ಆಫ್ ಎಕ್ಸ್ಪೀರಿಯನ್ಸ್ ಇನ್ ವರ್ಕ್ ೫, ನನಗೂ ಐದೇ ಆದ್ರೆ ಅದೂ ಇವರೆಲ್ಲ ಮಾಡುವ ಕೆಲಸಗಳಲ್ಲಲ್ಲ. ಬೇರೆಯ 'ಕೆಲಸ'ಗಳಲ್ಲಿ. ಹಿಹಿಹಿ. ಮುಂಜಾನೆ ಎದ್ದು ಪೇಪರು ಓದಿ ತಿಂಡಿ ತಿಂದು ಗುರುತು ಹಾಕಿಕೊಂಡಿರುವ ಕಂಪೆನಿಗಳಿಗೆ ಭೇಟಿ ಕೊಡುವುದು (ಇಂಟರವ್ಯೂವ್ ಗೆ ಅಂತ ಹೇಳೋದು ಸರಿಯಲ್ಲ ನೋಡಿ) ನನ್ನ ಹವ್ಯಾಸ !. ಬಿ.ಎಂ.ಟಿ.ಸಿ ಬಸ್ಸಿನಲ್ಲೇ ಸಂಚರಿಸುತ್ತೇನೆ. ಅರೆರೆ ಮಹಾನ್ ಪರಿಸರ ಪ್ರೇಮಿ ಅಂತೇನೂ ಇಲ್ಲಾ, ಅದಕ್ಕೇ ಬೇರೆಯವೇ ಕಾರಣಗಳಿವೆ. ಅದೆಲ್ಲ ಮುಂದೆ ಗೊತ್ತಾಗುತ್ತೆ ಬಿಡಿ. ಗರ್ಲ್ ಫ್ರೆಂಡ್ಸ್ ಇವತ್ತೂ (!)ಯಾರೂ ಇಲ್ಲಾ. ಫ್ರೆಂಡ್ಸ್ ವ್ಹೂ ಆರ್ ಗರ್ಲ್ಸ್ ... ಮ್ ಇದಾರೆ ಇವತ್ತು ಇರ್ತಾರೆ ನಾಳೆ ಗೊತ್ತಿಲ್ಲ. ಅಯ್ಯೋ ಹೋಗಲಿ ಬಿಡಿ ಇಷ್ಟೆಲ್ಲ ಸಂಬಂಧಗಳ ರಗಳೆ ಯಾಕೆ 'ಆದ' ಮೇಲೆ ಡಿಸೈಡ್ ಮಾಡೋಣ ಓ.ಕೆ?
ಇನ್ನೂ ಹೊಸ ಹೊಸ ಐಟೆಮ್ ಗಳು ಮುಂದೆ ಬರ್ತಾರೆ ಅವರನ್ನು ಆವಗಾವಾಗ ಪರಿಚಯಿಸುತ್ತೇನೆ. ನಮ್ಮ ಇವತ್ತಿನ ಕೊನೆಯ ಪರಿಚಯ ಜ್ಯಾಕ್. ಹೆಸ್ರು ಕೇಳಿದ ಕೂಡ್ಲೆ ಮೈಯೆಲ್ಲಾ ಜುಂ ಅಂತೇ? ಹಾಗಾದ್ರೆ ನೀವು ಹುಡುಗೀನೇ ಇರಬೇಕು. ದೇವ್ರು ಇವನ ಕೈಯಲ್ಲಿ ಹುಡುಗೀರ ಗೆಳೆತನದ ರೇಖೆ ತುಂಬಾ ಉದ್ದ ಕೊಟ್ಟಿದ್ದಾನೆ. ಹೃತಿಕ್ ರೋಷನ್ ಹೈಟು, ಸಲ್ಮಾನ್ ಖಾನ್ ಮೈಕಟ್ಟು, ಶಾಹರುಖ್ ಖಾನ್ ಗುಳಿಗಲ್ಲ, ಲಿಯೋನಾರ್ಡೊ ಹೇರ್ ಸ್ಟೈಲ್, ಅರ್ಮಾನಿ ವಾಚ್, ಹೊಂಡಾ ಸಿಟಿ ಕಾರು ಇದ್ಯಾವುದೂ ಇಲ್ಲ ಇವನಲ್ಲಿ. ಆದ್ರೂ ಅದು ಹೇಗೋ ಏನೋ ಇವನ ಬಳಿ ವಾರಕ್ಕೊಂದು ಹೊಸ ನಂಬರಿನಿಂದ "ಚಿನ್ನು ಐ ಲವ್ ಯೂ" ಅನ್ನೋ ಮೆಸೇಜು ಇರುತ್ತೆ. ಬ್ಲಫ್ ಮಾಸ್ಟರ್, ಫ್ಲರ್ಟ್ ನಂ -೧ (ಅಂದ್ರೆ ನಂಬರ ಒಂದಕ್ಕಿಂತಲೂ ಮೇಲೆ ಎಂದರ್ಥ).
ಇವರ ನಿಜವಾದ ಹೆಸ್ರು ರಾಜು ಮಾನ್ವಿಗೌಡ್ರ. ನಾವು ಕರೆಯೋದು ಜ್ಯಾಕ್ ಜ್ಯಾಕನಗೌಡ್ರ ಅಂತ. ಗರ್ಲ್ ಫ್ರೆಂಡ್ಸು? ಯಾವ ಏರಿಯಾದಲ್ಲಿರೋಳು ಬೇಕು ಹೇಳಿ ಒಂದು ನಂಬರ್ ಮತ್ತು ಹೆಸರು ಹೇಳ್ತಾನೆ. ಆರು ತಿಂಗಳಿಂದ ಇವರು ತಮ್ಮ ಫ್ಲರ್ಟಿಂಗ್ ರಿಕ್ರೂಟ್ ಮೆಂಟ್ ರಾಷ್ಟ್ರೀಯ ಸ್ತರದವರೆಗೆ ವಿಸ್ತರಿಸಿದ್ದಾರೆ. ಚಂಡೀಗಢ ಮತ್ತು ಹೈದ್ರಾಬಾದನಲ್ಲಿ ಎರಡು ಸೆಂಟರಗಳಿವೆ. ಅಂದರೆ ಅಲ್ಲಿಯವು ಎರಡು ಹುಡುಗೀಯರು ಈಗ ಇವರ ಗರ್ಲ್ ಫ್ರೆಂಡ್ಸ್ ಪಟ್ಟಿಯಲ್ಲಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಫ್ಲರ್ಟಿಂಗ್ ಜಾಲವನ್ನು ವಿಸ್ತರಿಸುವತ್ತ ಕಾರ್ಯನಿರತರಾಗಿದ್ದಾರೆ. ಅದಕ್ಕೆ ಮಿ.ಮಲಿಕ್ ಅವರು ಸಂಪೂರ್ಣ ಸಹಾಯ ನೀಡುತ್ತಿದ್ದಾರೆ. ಇವರ ಬಳಿ ಡಾಟಾ ಬ್ಯಾಕ್-ಅಪ್ ಗಾಗಿ ನಾಲ್ಕು ಡೆಡ್ ಸಿಮ್ ಕಾರ್ಡುಗಳಿವೆ. ಅದು ಇವರ ಹಿಂದಿನ ಇಂದಿನ ಎಲ್ಲ ಹುಡುಗಿಯರ ಡಾಟಾಬೇಸ್. ಇನ್ನೊಂದು ಇವರ ಸ್ಪೇಷಾಲಿಟಿ ಅಂದ್ರೆ ಮೊಬೈಲ್ ನಂಬರ್ ಗಳನ್ನು ದಾಖಲೆ ಮಾಡುವ ರೀತಿ. m@abc ಅಂದ್ರೆ ಮಂಜುಳಾ ಫ್ರಾಮ್ ABC ಕನ್ಸಲ್ಟನ್ಸಿ. 9@p ಅಂದ್ರೆ ೯ ನೇ ನಂಬರ ಪ್ಲಾಟಫಾರ್ಮನಲ್ಲಿ ಭೇಟಿಯಾದ ಪ್ರಿಯಾಂಕ್ ಇತ್ಯಾದಿ ಇತ್ಯಾದಿ.
ಹಾ, ಅಬ್ಬಾ! ಇನ್ನೂ ಏನೇನೋ ಇದೆ ಇವರೆಲ್ಲರ ಕಥೆ ಹೆಳೋಕೆ ಹೋದ್ರೆ. ಅವರ ಪರಿಚಯವೇ ಒಂದು ಏಕ್ತಾ ಕಪೂರಳ ಮೆಗಾ ಸೀರಿಯಲ್ಲ್ ಆಗಬಹುದು. ಈಗ ಇಲ್ಲಿಗೆ ನಿಲ್ಲಿಸ್ತೇನೆ.ಮುಂದಿನ ಸರಣಿ ಹೆಡ್-ಲೈನ್ "ಥ್ರೀ ಪೆಗ್ಸ್". ಇಂದು ಪಾರ್ಕ್ ವೀವ್ ನಲ್ಲಿ ಕುಳಿತಾಗ ನಮ್ಮ ಜ್ಯಾಕ್ ಒಂದು ಪೆಗ್ಗಿನ ನಂತರ ಒಂದು ಪೆಗ್ ಹಾಕಿದಾಗ ಹೇಳಿದ ನೈಜ ಕಥೆಗಳು. ಮುಂದಿನ ಪೆಗ್ಗಿನ ನಂತರ ಹೇಳ್ತೇನೆ.
Wednesday, June 18, 2008
ಏಳು ಮಾತು - ೨
೧. ನಮ್ಮಲ್ಲಿ ಕೆಲವರು ಪೆನ್ನಿನ ಮಸಿಯಂತೆ , ಇನ್ನು ಕೆಲವರು ಬಿಳಿ ಹಾಳೆಯಂತೆ.
೨. ವಿಚಿತ್ರ ! ನನ್ನ ಕೆಲವು ಸಂತೋಷಗಳ ಬಯಕೆಯೇ ದುಃಖದ ಒಂದು ಭಾಗವಾಗಿದೆ.
೩. ಮೆತ್ತನೆಯ ಹಾಸಿಗೆಯಲ್ಲಿ ಮಲಗಿರುವವರ ಕನಸುಗಳು ಬರೀ ನೆಲದ ಮೇಲೆ ಮಲಗಿರುವ ಕನಸುಗಳಿಗಿಂತ ಸುಂದರವಾಗೇನಿರುವುದಿಲ್ಲವೆಂದ ಮೇಲೆ ಈ ಜೀವನವು ನ್ಯಾಯ ಸಮ್ಮತವಾಗಿದೆ ಎನ್ನುವುದನ್ನು ಹೇಗೆ ಧಿಕ್ಕರಿಸಲಿ?
೪. ಆಕಾಶಗಂಗೆಯ ಕಿಟಕಿಯಿಂದ ಇಣುಕಿ ನೋಡುವವರಿಗೆ ಭೂಮಿ ಮತ್ತು ಸೂರ್ಯನ ನಡುವಿನ ಜಾಗ(ಆಕಾಶ) ಆಕಾಶವೆಂದೆನಿಸುವುದಿಲ್ಲ.
೫. ಓ ದೇವರೇ ! ಮೊಲವನ್ನು ನನ್ನ ಬೇಟೆಯಾಗಿಸುವುದಕ್ಕೆ ಮೊದಲು ನನ್ನನ್ನು ಸಿಂಹದ ಬೇಟೆಯ ಆಹಾರವಾಗಿಸು (ಬೇಟೆಯಾಗಿಸು).
೬. ಹವಳದ ಮುತ್ತು ಎಂಬುದು ಮರಳಿನ ಕಣದ ಸುತ್ತ ಕಷ್ಟ-ದುಃಖಗಳಿಂದ ಕಟ್ಟಿದ ಗುಡಿಯಂಥದ್ದು. ಈ ದೇಹವೆಂಬ ಮರಳಿನ ಕಣದ ಸುತ್ತ ನಾವು ಹಂಬಲಗಳನ್ನು ಕಟ್ಟಿ ಏನಾಗಿಸುತ್ತೆವೆಯೋ?
೭. ಕಲ್ಲುಹರಳಿನಂತಹ ನನ್ನನ್ನು ದೇವರು ಈ ವಿಸ್ಮಯಕರ ಕೆರೆಯಲ್ಲಿ ಚೆಲ್ಲಿದಾಗ ನಾನು ಕೆರೆಯ ಶಾಂತತೆಯನ್ನು ಕೆದಡಿದೆ. ಅಸಂಖ್ಯಾತ ಅಲೆಯ ಉಂಗುರಗಳನ್ನು ಉಂಟು ಮಾಡಿದೆ. ಆದ್ರೆ ಯಾವಾಗ ಕೆರೆಯ ಆಳವಾದ ತಳವನ್ನು ಸೇರಿದೆನೋ ಶಾಂತನಾದೆ, ತಟಸ್ಥನಾದೆ.
Sunday, June 15, 2008
ಬೆಳದಿಂಗಳು (ಭಾಗ - ೪)
ಚೈತ್ರ ಮಾಸ ಮುಗಿಯುತ್ತ ಬಂದಿತ್ತು. ನಾನು ಫಾರಿಸ್ ಎಫಾಂಡಿಯ ಮನೆಗೆ ಆಗಾಗ್ಗೆ ಭೇಟಿನೀಡತೊಡಗಿದೆ; ಸಲ್ಮಾಳನ್ನು ಮಾತನಾಡಿಸಲು, ಆ ಸುಂದರವಾದ ಹೂದೋಟದ ಮಧ್ಯೆ ಕುಳಿತು ಅವಳ ಸೌಂದರ್ಯವನ್ನು ನೋಡುತ್ತ, ಅವಳ ಜಾಣತನಕ್ಕೆ ಆಶ್ಚರ್ಯಪಡುತ್ತಾ ಹಾಗೂ ದುಃಖದ ಸ್ತಬ್ಧತೆಯನ್ನು ಕೇಳುತ್ತಾ.
ಪ್ರತಿ ಭೇಟಿಯೂ ನನಗೆ ಅವಳ ಸೌಂದರ್ಯದ ಹೊಸ ಅರ್ಥ ತಿಳಿಸಿತು. ಅವಳ ಆತ್ಮದ ಒಳನೋಟ ತೋರಿಸಿತು. ಅವಳ ಮನದ ಪುಟಗಳನ್ನು ಓದುವವ ಹಾಗೂ ಆ ಪ್ರೇಮ ಪಲ್ಲವಿಯನ್ನು ನಾನು ಹಾಡುವವನಂತಾದೆ ಆದರೂ ನಾನೆಂದೂ ಓದು ಮುಗಿಸಲಾಗದ ಪುಸ್ತಕ ಅವಳು. ಯಾವ ಹೆಣ್ಣಿಗೆ ಆತ್ಮ ಸೌಂದರ್ಯದ ಹಾಗೂ ಪವಿತ್ರ ದೇಹದ ದೇವಾನುಗ್ರಹವಾಗಿದೆಯೋ ಅದನ್ನು ನಾವು ಕೇವಲ ಪ್ರೀತಿಯಿಂದಲೇ ಅರಿಯಬಹುದು. ಅಲ್ಲಿ ಎಲ್ಲವೂ ತೆರೆದಿಟ್ಟಂತೆ ಆದರೂ ಗೌಪ್ಯ. ಅಲ್ಲಿ ಸಕಲವೂ ಗೌಪ್ಯ ಆದರೂ ಎಲ್ಲವನ್ನೂ ಅರ್ಥೈಸಿಕೊಳ್ಳಬಹುದು. ಅಂತಹ ಹೆಣ್ಣನ್ನು ವರ್ಣಿಸಲು ಹೋದರೆ ಅವಳು ಮುಷ್ಠಿಯಲ್ಲಿ ಹಿಡಿಯಲು ಹೋದ ಗಾಳಿಯಂತೆ ಮಾಯವಾಗುತ್ತಾಳೆ.
ಸಲ್ಮಾ ಆಂತರಿಕ ಮತ್ತು ಬಾಹ್ಯ ಎರಡೂ ರೀತಿಯ ಸೌಂದರ್ಯವನ್ನು ಪಡೆದವಳು. ಅವಳ ಬಗ್ಗೆ ಏನೂ ಅರಿಯದ ನಾನು ಏನೆಂದು ಬಣ್ಣಿಸಲಿ? ಮೃತ ದೇಹವು ಇಲ್ಲವೇ ಸಾವನ್ನಪ್ಪಿದ ವ್ಯಕ್ತಿಯು ಕೋಗಿಲೆಯ ಗಾನವನ್ನು, ಹೂವಿನ ಘಮವನ್ನು ನೆನಪಿಡಬಲ್ಲನೇ? ಹೇಳಬಲ್ಲನೇ? . ಸಂಕೋಲೆಗಳಲ್ಲಿ ಕಗ್ಗತ್ತಲು ಕೋಣೆಗಳಲ್ಲಿ ಬಂಧಿತನಾದ ಖೈದಿಯು ಮುಂಜಾವಿನ ತಂಪು ಗಾಳಿಯನ್ನು ಸ್ವಚ್ಛಂದ ಆಕಾಶದ ಸೊಬಗನ್ನು ವರ್ಣಿಸಬಲ್ಲನೇ?
ಹಾ.. ಈ ಮೌನವು ಸಾವಿಗಿಂತಲೂ ಕ್ರೂರಿಯಲ್ಲವೇ?
ನನ್ನ ಸಾಧಾರಣವಾದ ಸಾಮಾನ್ಯ ಶಬ್ದಗಳು, ಸೃಷ್ಟಿ ಪ್ರಕಾಶದಂತಿರುವ ಅವಳ ಚೆಲುವನ್ನು ಹೇಳಲಾಗದೇ ಆ ಸೌಂದರ್ಯದ ಖನಿಯ ಘನತೆಗೆ ಚ್ಯುತಿ ಬರುವುದೇನೋ ಎಂಬ ಹೆದರಿಕೆ ನನಗೆ.
ಕಿಟಕಿಯಿಂದ ಹಾದು ಬರುವ ತೆಳುವಾದ ಬೆಳದಿಂಗಳಿನಂತೆ, ಆ ರೇಶಿಮೆಯ ಬಿಳಿ ಸೀರೆಯಲ್ಲಿ ಸಲ್ಮಾ ನನಗೆ ಕಂಡಳು. ಒಂದೇ ಲಯದ ರಮ್ಯಮಯವಾದ ನಡಿಗೆ ಅವಳದು. ಮೆದುನುಡಿಯ ಜೇನಿನಂಥ ದನಿ ಅವಳದು. ಗಾಳಿಗೆ ಮುಂಜಾವಿನ ಇಬ್ಬನಿ ಹನಿಗಳು ಹೂಗಳಿಂದ ಬೀಳುವಂತೆ ಮಾತುಗಳು ಅವಳ ತುಟಿಗಳಿಂದುದುರುತ್ತವೆ.
ಸಲ್ಮಾಳ ಮುಖ !!! ಆಹ್..! ಯಾವ ಶಬ್ದವೂ ಅದನ್ನು ವರ್ಣಿಸಲಸಾಧ್ಯ. ಅದು ಮನದೊಳಗೆ ಅತಿಯಾದ ನೋವಾಗಿ ನಂತರ ಅದೇ ನೋವು ಸ್ವರ್ಗದ ಉತ್ಕರ್ಷ ಸಂತೋಷದಲ್ಲಿ ಪರಿವರ್ತನೆಗೊಂಡಂತೆ.
ಸಲ್ಮಾಳ ಮುಖದ ಚೆಲುವು ಶ್ರೇಷ್ಠವಾದದ್ದು ಅಂತ ನಾನು ಹೇಳ್ತಿಲ್ಲ. ಆದರೆ ಅದು ಚಿತ್ರಕಾರನ ಕುಂಚದಲ್ಲಿ ಮೂಡಿದ ಅಥವಾ ಶಿಲ್ಪಿಯ ಕೆತ್ತನೆಯಲ್ಲಿ ಅರಳಿರುವ ಯಾವುದೇ ಕನಸಿನ ಕಲ್ಪನೆಯ ರೂಪಾಂತರದಂಥದ್ದಲ್ಲ. ಅದು ಆ ಶಿಲ್ಪಿಯ ಕೆತ್ತನೆಗೂ ನಿಲುಕದ ಚಿತ್ರಕಾರನ ಕುಂಚಕ್ಕೂ ಮೂಡಲಾರದಂಥ ಸೊಬಗು. ಸಲ್ಮಾಳ ಸೌಂದರ್ಯ ಅವಳ ಹೊಂಬಣ್ಣದ ಕೂದಲುಗಳಿಂದಲ್ಲ; ತಂಗಾಳಿಯ ಲಯಕ್ಕೆ ಹಾರಾಡುತ್ತಿರುವ ಆ ಕೇಶಗಳನ್ನು ಆವರಿಸಿದ ನಿಮಿತ್ಯದ ನಿರ್ಮಲತೆಯಲ್ಲಿದೆ. ಸಲ್ಮಾಳ ಚೆಲುವು ಬಟ್ಟಲು ಕಣ್ಣುಗಳಲ್ಲಲ್ಲ; ಆ ಕಣ್ಣುಗಳಿಂದ ಹೊರಹೊಮ್ಮುವ ದೇದಿಪ್ಯಮಾನವಾದ ನೋಟದಲ್ಲಿದೆ. ಸಲ್ಮಾಳ ಬೆಡಗು ಮಧು ತುಂಬಿದ ಅವಳ ತುಟಿಗಳಲ್ಲಲ್ಲ; ಆ ತುಟಿಗಳಿಂದ ಹೊರಹೊಮ್ಮುವ ಮಧುರ ದನಿಯಲ್ಲಿದೆ. ಸಲ್ಮಾಳ ಆಕರ್ಷಣೆ ಆನೆದಂತ ದಂತಿರುವ ಅವಳ ನುಣುಪಾದ ಕೊರಳಿನಲ್ಲಿಲ್ಲ; ನಾಚಿಕೊಂಡಾಗ ಚೂರು ಮುಂಬಾಗಿದ ಆ ಕೊರಳಿನ ಬಾಗುವಿಕೆಯಲ್ಲಿದೆ. ಅವಳ ಮೃಚ್ಛಕಟಿಕದಂತಹ ದೇಹಾಕರ್ಷಣೆಯಲ್ಲಲ್ಲ; ಅವಳ ಆತ್ಮದ ಪಾವಿತ್ರತೆಯಲ್ಲಿದೆ. ಭೂಮಿ ಮತ್ತು ಆಕಾಶದ ಮಧ್ಯೆ ಬೆಳಗುತ್ತಿರುವ ಶ್ವೇತಪ್ರಭೆಯಂತೆ ಅವಳು. ಕಾವ್ಯದ ಕಾಣಿಕೆಯಂಥವಳು. ಆದರೆ ಕವಿಗಳು ಎಂದಿಗೂ ಅಸಂತುಷ್ಟ ಜೀವಗಳೇ. ಅವರ ಚೈತನ್ಯದ ಚೆಲುವೆ ಅದೆಷ್ಟೆತ್ತರೆಕ್ಕೇರಿದರೂ ಅವರೆಂದಿಗೂ ಕಣ್ಣೀರಿನಲ್ಲೇ ಮುಳುಗು ಹಾಕುವವರು.
ಸಲ್ಮಾ, ಮಾತಿಗಿಂತ ಗಹನವಾದ ವೈಚಾರಿಕತೆಯುಳ್ಳವಳು. ಅವಳ ಮೌನವು ವ್ಯಕ್ತಿಯೊಬ್ಬನನ್ನು ಕನಸಿನ ಲೋಕಕ್ಕೆ ಕೊಂಡೊಯ್ದು, ಅವನ ಹೃದಯದ ಬಡಿತಗಳನ್ನು ಅವನಿಗೇ ಕೇಳಿಸುವಂತೆ ಮಾಡಿ, ಆ ವ್ಯಕ್ತಿಯ ವಿಚಾರ ಮತ್ತು ಭಾವನೆಗಳು ಭೂತಗಳಾಗಿ ಅವನ ಕಣ್ಣನ್ನೇ ಎವೆಯಿಕ್ಕದೇ ದಿಟ್ಟಿಸುತ್ತ ನಿಲ್ಲುವಂತೆ ಮಾಡುತ್ತದೆ.
ಅವಳು ತನ್ನ ಜೀವನದ ಯಾವುದೋ ಆಳವಾದ ದುಃಖದ ಭಾರವನ್ನು ಹೊರೆದಂತಿದ್ದಳು. ಅದು ಅವಳ ವಿಚಿತ್ರಾಕರ್ಷಣೆಯುಳ್ಳ ಸೌಂದರ್ಯವನ್ನು ಮತ್ತು ಘನತೆಯನ್ನು ಹೆಚ್ಚಿಸಿದ್ದವು, ಹೇಗೆಂದರೆ ಅರಳಿರುವ ಹೂಗಳಿರುವ ಗಿಡವು ಹನಿಮಂಜಿನ ಮೋಡಗಳ ಭಾರ ಹೊತ್ತು ಇನ್ನೂ ಸುಂದರವಾಗಿ ಕಾಣುವಂತೆ.
ಇಂತಹದೊಂದು ಭಾವವೇ ನಮ್ಮಿಬ್ಬರ ಮನಸ್ಸನ್ನು ಸೇರಿಸಿತ್ತು. ಒಬ್ಬರಿಗೊಬ್ಬರು ಆ ಚಹರೆಗಳಲ್ಲಿ ತಮ್ಮ ಹೃದತದ ಬಡಿತದ ಪ್ರತಿಧ್ವನಿಯನ್ನು ಮತ್ತು ಅದೇನು ಹೇಳಬಯಸುತ್ತದೆಯೋ ಎಂಬುದನ್ನು ಓದಿಕೊಂಡಿದ್ದೆವು.
ದೇವರು ಎರಡು ಜೀವಗಳನ್ನು ಒಂದಾಗಿ ಸೃಷ್ಟಿಸಿದ್ದಾನೆ. ಆ ಜೀವಗಳನ್ನು ಬೇರ್ಪಡಿಸುವುದು ಇಲ್ಲವೇ ಬೇರೆಬೇರೆಯಾಗುವುದು ಆ ಜೀವಗಳ ಮರಣವಲ್ಲದೇ ಮತ್ತೇನಾಗಲಾರದು.
ಎರಡು ನೊಂದ ಹೃದಯಗಳು ಬೇಗನೇ ಒಂದಾಗುತ್ತವೆ. ಒಂದಕ್ಕೊಂದು ಸೇರಿಕೊಳ್ಳುತ್ತವೆ. ಅಪರಿಚಿತ ವ್ಯಕ್ತಿಯೊಬ್ಬ ಇನ್ನೊಬ್ಬ ಅಪರಿಚಿತನನ್ನು ಅಜ್ಞಾತ ನೆಲದಲ್ಲಿ ಭೇಟಿಯಾದಾಗ ಕೂಡಿಕೊಳ್ಳುತಾರಲ್ಲಾ ಹಾಗೆ. ಎರಡು ನೊಂದ ಮನಗಳು ಒಂದಾದಾಗ, ಸುಖದ ಭವ್ಯತೆಯಲ್ಲಿ ಅಗಲಲಾರವು. ಕಣ್ಣೀರಿನಲಿ ತೊಳೆದು ಶುಭ್ರಗೊಳಿಸಿದ ಪ್ರೀತಿ ಎಂದಿಗೂ ಪವಿತ್ರವಾಗಿರುತ್ತದೆ ಸುಂದರವಾಗಿರುತ್ತದೆ.
ಸಮಾಧಿಯತ್ತ ಹೆಜ್ಜೆ (ಭಾಗ - ೩)
ವಿಧಿಯ ಕೈವಾಡ (ಭಾಗ -೨)
ಮೊದಲ ಪ್ರೇಮ (ಭಾಗ -೧)
ಚಿತ್ರಕೃಪೆ: www.fantasyecards.com
Thursday, June 05, 2008
ಸಮಾಧಿಯತ್ತ ಹೆಜ್ಜೆ (ಭಾಗ - ೩)
ಕೆಲವೇ ದಿನಗಳಲ್ಲಿ ನನ್ನನ್ನು ಏಕಾಂತತೆ ಆವರಿಸಿತು. ಆ ಖಿನ್ನ ಮಾಸಿದ ಮುಖಗಳ ಪುಸ್ತಕಗಳು ಬೇಸರವಾಗತೊಡಗಿದವು. ಒಂದು ಕುದುರೆಗಾಡಿ ಹಿಡಿದು ನಾನು ಫಾರಿಸ್ ಎಫಾಂಡಿಯ ಮನೆಕಡೆಗೆ ಹೊರಟೆ. ಜನರು ಸಾಮಾನ್ಯವಾಗಿ ವನವಿಹಾರಕ್ಕೆಂದು ತೆರಳುತ್ತಿದ್ದ ಪೈನ್ ಮರಗಳನ್ನು ದಾಟಿದ ನಂತರ ಕುದುರೆಗಾಡಿ ಮರಗಳಿಂದ ಆವೃತವಾದ ಛಾವಣಿಯಂತಿರುವ ಒಂದು ಖಾಸಗಿ ರಸ್ತೆಯತ್ತ ತಿರುಗಿತು. ಅಲ್ಲಿ ಹಾದುಹೋಗುವಾಗ ದ್ರಾಕ್ಷಿಯ ತೋಟ, ರಸ್ತೆಯ ಅಕ್ಕಪಕ್ಕ ಹರಡಿಕೊಂಡಿದ್ದ ಹಚ್ಚಹಸುರಾದ ಹುಲ್ಲಿನ ಹಾಸು ಹಾಗೂ ಅಸಂಖ್ಯಾತ ಬಗೆಬಗೆಯ ಬಣ್ಣದ ಅರಳಿದ ಹೂಗಳು ಕಾಣಿಸಿದವು.
ಕೆಲವೇ ನಿಮಿಷಗಳಲ್ಲಿ ನಾನು ಕುಳಿತಿರುವ ಕುದುರೆಗಾಡಿ ಸುಂದರ ಹೂದೋಟದ ಮಧ್ಯೆ ಸ್ಥಾಪಿತವಾಗಿರುವ ಒಂದು ಏಕಾಂತ ಮನೆಯೆದುರಿಗೆ ನಿಂತಿತು. ಗುಲಾಬಿ - ಮಲ್ಲಿಗೆಯ ಘಮ ಗಾಳಿಯಲ್ಲಿ ತೇಲುತ್ತಿತ್ತು. ಗಾಡಿಯಿಂದ ಇಳಿದು ಆ ಏಕಾಂತ ಮನೆಯೆಡೆಗೆ ಹೆಜ್ಜೆ ಹಾಕುತ್ತಾ ಹೂದೋಟದೊಳಕ್ಕೆ ಕಾಲಿರಿಸುತ್ತಿದ್ದಂತೆಯೇ ಫಾರಿಸ್ ಎಫಾಂಡಿ ನನ್ನೆಡೆಗೆ ನಡೆದುಬರುತ್ತಿರುವುದನ್ನು ಕಂಡೆ.
ಮಗನನ್ನು ಕಂಡು ಸಂತೋಷಗೊಂಡ ತಂದೆ, ಮಗನನ್ನು ಕರೆದುಕೊಂಡು ಹೋಗುವಂತೆ ಫಾರಿಸ್ ಎಫಾಂಡಿ ನನ್ನನ್ನು ತನ್ನ ಮನೆಯೊಳಕ್ಕೆ ಕರೆದುಕೊಂಡು ಹೋದ. ಹೋಗುವಾಗ ನಾನು ತನ್ನದೇ ಮಗನೇನೋ ಎಂಬಂತೆ ನನ್ನ ಕ್ಷೇಮದ ಬಗ್ಗೆ ಭವಿಷ್ಯದ ಬಗ್ಗೆ ನನ್ನ ವಿದ್ಯಾಭ್ಯಾಸದ ಬಗ್ಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ. ನಾನೂ ಕೂಡ ಅತ್ಯುತ್ಸಾಹದಿಂದ ಉತ್ತರಿಸಿದೆ. ನನ್ನ ಮಹತ್ವಾಕಾಂಕ್ಷೆಗಳನ್ನು ಹೇಳುವಾಗ ನನ್ನ ಕಿವಿಗಳಲ್ಲಿ ಕೀರ್ತಿಯ ಸ್ತೋತ್ರ ಗುಂಯ್ ಗುಡುತ್ತಿತ್ತು ಹಾಗೂ ನಾನು ನನ್ನ ಕನಸಿನ ಲೋಕದಲ್ಲಿ ತೇಲುತ್ತಿದ್ದೆ.
ಅದೇ ಕ್ಷಣ... ಅದೇ ಕ್ಷಣದಲ್ಲಿ ಮಖಮಲ್ ಬಟ್ಟೆಯ ಪರದೆಯ ಹಿಂದಿನಿಂದ ಅಚ್ಚ ಬಿಳಿ ರೇಷ್ಮೆಯ ವಸ್ತ್ರವನ್ನುಟ್ಟ ಸುಂದರಿ ನಮ್ಮೆಡೆಗೆ ಬರುತ್ತಿದ್ದಾಳೆ. ಫಾರಿಸ್ ಎಫಾಂಡಿ ಹಾಗೂ ನಾನು ನಮ್ಮ ಸ್ಥಾನದಿಂದ ಮೇಲೆದ್ದು ನಿಂತುಕೊಂಡೆವು. "ಇವಳು ನನ್ನ ಮಗಳು ಸಲ್ಮಾ" ಎಂದ. ನಂತರ ಅವಳನ್ನು ಕುರಿತು ನನ್ನೆಡೆಗೆ ತೋರಿಸುತ್ತಾ "ಅದೃಷ್ಟವು ನನ್ನ ಪ್ರೀತಿಯ ಹಳೆಯ ಕಾಲದ ಸ್ನೇಹಿತನನ್ನು ಇವನಲ್ಲಿ ನೀಡಿದೆ" ಎಂದು ಹೇಳಿದ. ಸಲ್ಮಾ ನನ್ನೆಡೆಗೆ ದಿಟ್ಟಿಸಿ ನೋಡಿದಳು. ಅವಳ ಕೈಯನ್ನು ಸ್ಪರ್ಶಿಸಿದಾಗ ಮಲ್ಲಿಗೆಯ ಹೂಗಳನ್ನು ಸ್ಪರ್ಶಿಸಿದಂತಾಯಿತು. ಅಷ್ಟೇ ಅಲ್ಲ ನನ್ನ ಹೃದಯದಲ್ಲಿ ಬಾಣ ಚುಚ್ಚುವಂತೆ ಸಿಹಿನೋವಾಯಿತು.
ಸಲ್ಮಾ ಆಗಮಿಸಿದ ನಂತರ ನಾವೆಲ್ಲ ಸುಮ್ಮನೆ ಕುಳಿತಿದ್ದೆವು. ಸ್ವರ್ಗದ ಚೈತನ್ಯವೊಂದು ತುಂಬಿಕೊಂಡು ಅವಳು ಬಂದ ಹಾಗಾಗಿತ್ತು ನನಗೆ. ನಮ್ಮೆಲ್ಲರ ಮಧ್ಯೆ ಆವರಿಸಿರುವ ಮೌನವನ್ನು ಅರ್ಥೈಸಿಕೊಂಡವಳಂತೆ ನನ್ನೆಡೆಗೆ ನೋಡಿ ನಸುನಕ್ಕು ಹೇಳಿದಳು "ನನ್ನ ತಂದೆಯು ತನ್ನ ಯೌವನ ಕಾಲದ ಗೆಳೆಯರ ಬಗ್ಗೆ ಮತ್ತು ನಿನ್ನ ತಂದೆಯೊಂದಿಗೆ ಕಳೆದ ದಿನಗಳ ಬಗ್ಗೆ ಸಾಕಷ್ಟು ಕಥೆಗಳನ್ನು ಹೇಳಿದ್ದಾರೆ. ನಿನ್ನ ತಂದೆಯೂ ಹಾಗೆಯೇ ನಿನ್ನೊಂದಿಗೆ ಹೇಳಿರುವುದಾದರೆ ಇದೇ ನಮ್ಮ ಮೊದಲ ಭೇಟಿ ಅನಿಸಲಾರದು".
ನಮ್ಮ ಮಧ್ಯೆ ಕುಳಿತಿರುವ ಫಾರಿಸ್ ಎಫಾಂಡಿ, ಬಂದ ಅತಿಥಿಯೊಂದಿಗೆ ತನ್ನ ಮಗಳು ಆಪ್ತ ಸೌಜನ್ಯದಿಂದ ಮಾತನಾಡುವುದನ್ನು ಕಂಡು ಹರ್ಷಿತನಾಗಿ ಹೇಳಿದ "ಸಲ್ಮಾ ತುಂಬಾ ಸಂಕೋಚ ಸ್ವಭಾವದವಳು ಭಾವುಕಳು. ಅವಳು ಪ್ರತಿಯೊಂದನ್ನೂ ತನ್ನ ಚೈತನ್ಯಭರಿತ ಕಣ್ಣುಗಳಿಂದ ನೋಡುತ್ತಾಳೆ". ಮತ್ತೆ ಅವನು ಮಾತಿಗೆ ತೊಡಗಿದ. ನನ್ನಲ್ಲಿ ಮಾಯೆಯನ್ನು ಕಂಡಂತೆ ಫಾರಿಸ್ ಎಫಾಂಡಿ ಪುನಃ ನೆನಪುಗಳ ರೆಕ್ಕೆಗಳೊಂದಿಗೆ ಆ ದಿನಗಳಿಗೆ ಹಿಂದಿರುಗಿದ. ನನಗೆ ಅವನು ಮಳೆಗಾಳಿ ಬಿಸಿಲನ್ನು ಮೆಟ್ಟಿ ಎತ್ತರಕ್ಕೆ ಬೆಳೆದು ನಿಂತ ಹಳೆಯ ಮರದಂತೆ ಕಂಡ.
ಸಲ್ಮಾ ಸುಮ್ಮನೆ ಕುಳಿತಿದ್ದಳು. ಆಗಾಗ ನನ್ನನ್ನೊಮ್ಮೆ ತನ್ನ ತಂದೆಯನ್ನೊಮ್ಮೆ ನೋಡುತ್ತಿದ್ದಳು. ಜೀವನವೆಂಬ ಪುಸ್ತಕದ ಮೊದಲ ಪುಟವನ್ನೊಮ್ಮೆ ಕೊನೆಯ ಪುಟವನ್ನೊಮ್ಮೆ ಓದಿದಂತೆ. ದಿನವು ಬಹು ಬೇಗ ಕಳೆಯಿತು. ಅದಾಗಲೇ ಸೂರ್ಯನು ಮುತ್ತು ಕೊಟ್ಟಾಗ ನಾಚಿಕೆಯಿಂದ ಕೆಂಪಾದ ಭೂಮಿಯಂತೆ ಹಳದಿ ಕಿರಣಗಳು ಲೆಬನಾನ್ ನ ಪರ್ವತಗಳನ್ನು ಆವರಿಸಿದ್ದವು. ಫಾರಿಸ್ ಎಫಾಂಡಿ ತನ್ನ ಹಳೆಯ ಅನುಭವಗಳನ್ನೆಲ್ಲ ನೆನಪಿಸಿಕೊಳ್ಳತೊಡಗಿದ. ನಾನು ಯಾವುದೋ ಮಾಯೆಗೊಳಪಟ್ಟವನಂತೆ ಕೇಳುತ್ತಾ ಅವನಿಗಿಂತಲೂ ಉತ್ಶಾಹಿತನಾಗಿ ಅವನ ನೆನಪುಗಳ ದೋಣಿಯ ವಿಹಾರದಲ್ಲಿ ಪಾಲ್ಗೊಂಡೆ. ಅವನ ದುಃಖ, ಸಂತೋಷದ ಘಳಿಗೆಯಾಗಿ ಪರಿವರ್ತನೆಗೊಂಡಂತಾಯಿತು.
ಸಲ್ಮಾ ಕಿಟಕಿಯ ಬಳಿ ಯಾವುದೋ ನೋವುತುಂಬಿದ ಕಣ್ಣುಗಳಿಂದ ಹೊರಗೆ ನೋಡುತ್ತ ಮೌನವಾಗಿ ಕುಳಿತಿದ್ದಳು. ಆದರೂ ಕೂಡ ಅವಳು ಸುಂದರವಾಗಿ ಕಾಣುತ್ತಿದ್ದಳು. ಸೌಂದರ್ಯಕ್ಕೆ ತನ್ನದೇ ಆದ ಭಾಷೆಯಿದೆ. ಅದಕ್ಕೆ ತುಟಿ ಮತ್ತು ನಾಲಿಗೆಗಳ ಚಾಲನೆಯಿಂದ ಉಂಟಾದ ಶಬ್ದದ ಅಗತ್ಯವಿಲ್ಲ.
ಅದೊಂದು ಕಾಲದಮಿತಿಗೂ ಮೀರಿದ ಭಾಷೆ. ಎಲ್ಲ ಮನುಜರಿಗೂ ಏಕರೂಪವಾದ ಭಾಷೆ. ಶಾಂತ ಕೆರೆಯೊಂದು ಜುಳುಜುಳು ನಾದ ಮಾಡುತ್ತಾ ಬರುವ ಝರಿಯನ್ನು ತನ್ನ ಒಡಲೊಳಕ್ಕೆ ಸೇರಿಸಿ ಅದನ್ನೂ ಶಾಂತತೆಗೊಳಪಡಿಸಿದಂತೆ.
ನಮ್ಮ ಆತ್ಮ ಮಾತ್ರ ಆ ಸೌಂದರ್ಯವನ್ನು ಗ್ರಹಿಸಬಲ್ಲದು. ಅದರೊಂದಿಗೆ ಜೀವಿಸಬಲ್ಲದು, ಬೆಳೆಯಬಲ್ಲದು. ನಾವು ಅದನ್ನು ಪದಗಳಲ್ಲಿ ಹಿಡಿದಿಟ್ಟು ವರ್ಣಿಸಲು ಹೋದರೆ ನಮ್ಮ ಗ್ರಹಿಕೆಯನ್ನು ಗೊಂದಲಕ್ಕೊಳಪಡಿಸುತ್ತದೆ. ಅದೊಂದು ನೋಡುವವರ ಮತ್ತು ನೋಡುವುದಕ್ಕೊಳಪಟ್ಟವರ ನೋಟದಿಂದ ಹುಟ್ಟಿದ ನಮ್ಮ ಕಾಣಿಗೆ ಕಾಣದಂಥ ಸಂವೇದನೆ.
ನೈಜ ಸೌಂದರ್ಯವೆಂಬುದು ಪವಿತ್ರ ಆತ್ಮಗಳಿಂದ ಹೊರಹೊಮ್ಮುವ ಪವಿತ್ರ ರಶ್ಮಿ. ಜೀವವೆಂಬುದು ಭೂಮಿಗೆ ಬಂದು ಹೂವಿಗೆ ಸುವಾಸನೆ ಹಾಗೂ ಬಣ್ಣವನ್ನು ನೀಡಿದಂತೆ ಅದು ದೇಹವನ್ನು ಪ್ರಕಾಶಗೊಳಿಸುತ್ತದೆ. ಹೆಣ್ಣು ಗಂಡುಗಳೆಂಬ ಎರಡು ಸ್ವರಗಳ ಮೇಳದಿಂದ ಉಂಟಾದ ಪ್ರೀತಿಯೇ ನಿಜವಾದ ಸೌಂದರ್ಯ.
ನನ್ನ ಮತ್ತು ಸಲ್ಮಾಳ ಮನಸ್ಸುಗಳು ಆ ದಿನ ಒಂದಕ್ಕೊಂದು ಭೇಟಿಯಾದುವೇ? ಅಥವಾ ಆ ಹಾತೊರೆಯುವಿಕೆಯ ಹಂಬಲವೇ ಅವಳನ್ನು ಅಪೂರ್ವ ಸುಂದರಿ ಎಂಬಂತೆ ಗೋಚರಿಸುವಂತೆ ಮಾಡೀತೇ? ಇಲ್ಲಾ ಯೌವನದ ನಶೆಯಲ್ಲಿ ಮುಳುಗಿದ ನನಗೆ ಅವಳು ಹಾಗೆ ಕಂಡಳೋ?
ನನ್ನ ಯೌವನವು ನನ್ನ ಸಹಜವಾದ ನೋಟವನ್ನು ಅವಳ ಕಣ್ಣುಗಳ ಹೊಳಪಿಗೆ ಮುತ್ತಿನಂಥ ಮಾತುಗಳಿಗೆ ಅವಳ ದೇಹಾಕರ್ಷಣೆಗೆ ಕುರುಡನನ್ನಾಗಿಸಿತೇ?
ಅಥವಾ
ಅವಳ ಕಣ್ಣ ಹೊಳಪು ಮಾಧುರ್ಯ ಮತ್ತು ಬೆಡಗು ನನ್ನ ಕಣ್ಣನ್ನು ತೆರೆಸಿತೇ? ನನಗೆ ಪ್ರೇಮದ ಮಿಲನವಿರಹಗಳನ್ನು ತೋರಿಸಿತೇ?
ಈ ಪ್ರಶ್ನೆಗಳಿಗುತ್ತರಿಸುವುದು ಕಷ್ಟ. ಆದರೆ ಆ ಗಳಿಗೆಯಲ್ಲಿ ನಾನು ಎಂದೆಂದೂ ಒಳಪಡದಂಥ ಉದ್ವೇಗವನ್ನನುಭವಿಸಿದೆ. ಒಲುಮೆಯೊಂದು ನನ್ನ ಹೃದಯದಲ್ಲಿ ಚಿಲುಮೆಯಾಗಿ ನೆಲೆಸಿತು. ಹೀಗೆ, ನನ್ನ ಸಲ್ಮಾಳ ಆ ಮೊದಲಲ್ಲದ ಮೊದಲ ಭೇಟಿಯ ಗಳಿಗೆ ಕರಗಿಹೋಯಿತು.
ಅದಕ್ಕೆ ಸ್ವರ್ಗದ ಸಂಕಲ್ಪವೂ ನನ್ನನ್ನು ಯೌವನದ ಏಕಾಂತತೆಯ ಬಂಧದಿಂದ ಮುಕ್ತಮಾಡಿತು. ನನ್ನನ್ನು ಪ್ರೀತಿಯ ಮೆರವಣಿಗೆಯಲ್ಲಿ ಹೊರಡಲು ಬಿಡಿ. ಈ ಜಗತ್ತಿನಲ್ಲಿ ಪ್ರೀತಿಯೆಂಬುದು ಏಕಮಾತ್ರ ಸ್ವಾತಂತ್ರ್ಯ. ಅದು ಮನಸ್ಸನ್ನು ಸಮಾಜದ ಮತ್ತು ಪ್ರಕೃತಿಯ ಅತಿಶಯ ನೀತಿನಿಯಮಗಳು ಅಲುಗಾಡಿಸಲಾಗದ ಎತ್ತರೆತ್ತರಕ್ಕೆ ಕೊಂಡೊಯ್ಯುತ್ತದೆ.
ಹೊರಡಲನುವಾದಾಗ ಫಾರಿಸ್ ಎಫಾಂಡಿ ನನ್ನ ಬಳಿಗೆ ಬಂದು ಶಾಂತಚಿತ್ತತೆಯಿಂದ ಹೇಳಿದ "ನನ್ನ ಮಗುವೇ, ನಿನಗಿನ್ನು ನನ್ನ ಮನೆ ದಾರಿ ಗೊತ್ತಿದೆಯಲ್ಲ. ಆಗಾಗ ಬರುತ್ತಾ ಇರು. ಅಷ್ಟೆ ಅಲ್ಲ ನೀನು ನಿನ್ನ ತಂದೆಯ ಮನೆಗೆ ಬಂದ ಹಾಗೆ ಎಂದು ತಿಳಿದುಕೋ. ನನ್ನನು ನಿನ್ನ ತಂದೆಯೆಂದೇ ಪರಿಗಣಿಸು. ಸಲ್ಮಾಳನ್ನು ನಿನ್ನ ತಂಗಿಯಂತೆ'. ಅಷ್ಟು ಹೇಳಿ ಫಾರಿಸ್ ಎಫಾಂಡಿ ತನ್ನ ಮಾತಿಗೆ ಅನುಮೋದನೆ ಪಡೆಯುವಂತೆ ಸಲ್ಮಾಳೆಡೆಗೆ ತಿರುಗಿದ. ಅವನ ಮಾತಿಗೆ ಗೋಣು ಹಾಕುತ್ತಾ ಅವಳು ನನ್ನೆಡೆಗೆ ಹಳೆಯ ಪರಿಚಿತ ಸ್ನೇಹಿತನನ್ನು ಪಡೆದಂತೆ ನೋಡಿದಳು.
ಫಾರಿಸ್ ಎಫಾಂಡಿಯ ಆ ಕೊನೆಯ ಮಾತು ನನ್ನನ್ನು ಮತ್ತು ಅವನ ಮಗಳನ್ನು ಪ್ರೀತಿಯ ಬಲಿಪೀಠದ ಅಕ್ಕಪಕ್ಕದಲ್ಲಿ ನಿಲ್ಲಿಸಿದಂತಾಯಿತು. ಸ್ವರ್ಗದ ಸಂಗೀತ ಉತ್ಕರ್ಷದಂತೆ ಆರಂಭವಾದ ಮಾತುಕತೆ ದುಃಖದಲ್ಲಿ ಕೊನೆಗೊಂಡಿತ್ತು. ನಮ್ಮಿಬ್ಬರ ಆತ್ಮಗಳನ್ನು ಬೆಳಕಿನ ಸಾಮ್ರಾಜ್ಯದಿಂದ ಪರಿವರ್ತಿಸಿ ಬತ್ತಿದ ಜ್ವಾಲೆಗಳನ್ನಾಗಿಸಿದವು. ಅದು ಮಧುರತೆಯನ್ನೂ ಕಹಿಯನ್ನೂ ಕೂಡಿದ ವಿಷದ ಅಮೃತದಂತಿತ್ತು.
ನಾನು ಆ ಮನೆಯಿಂದ ಹೊರಟಾಗ ನನ್ನ ಹೃದಯವು ನೀರಡಿಸಿದವನ ತುಟಿಗಳದುರುವಂತೆ ಅದುರುತ್ತಿತ್ತು.
ವಿಧಿಯ ಕೈವಾಡ (ಭಾಗ -೨)
ಮೊದಲ ಪ್ರೇಮ (ಭಾಗ -೧)
Sunday, June 01, 2008
ಬರಹಗಾರ ಹಾಗೂ ರೇಷ್ಮೆ ಹುಳು
ನನಗನಿಸಿದಂತೆ ಬಹಳಷ್ಟು ಬರಹಗಾರರು ರೇಷ್ಮೆ ಹುಳುವಿನ ಜೀವನ ನಡೆಸುತ್ತಾರೆ. ಲಾರ್ವಾಗಳಾಗಿ ಹುಟ್ಟಿ ತಾವೇ ವಿಸರ್ಜಿಸಿದ ಜೊಳ್ಳ(ಲ್ಲ)ನ್ನು ತಮ್ಮ ಸುತ್ತ ನೇಯ್ದುಕೊಂಡು ಕೆಲದಿನಗಳವರೆಗೆ ಸಮಾಧಿ ಸ್ಥಿತಿ ತಲುಪುತ್ತಾರೆ. ನಂತರ ಒಂದು ಹೊಸರೂಪ ಪಡೆದುಕೊಂಡು ಬಣ್ಣದ ಚಿಟ್ಟೆಯಾಗಿ ಹಾಯಾಗಿ ಹಾರಾಡುತ್ತಾ ಹೂವಿಂದೂವಿಗೆ ಸುತ್ತುತ್ತಾರೆ. ಹೊಗಳಿಕೆಯ ಮಧುರಸ ಕುಡಿದು ಅಮಲೇರಿ ಹಗುರಾದ ತಮ್ಮನ್ನು ತಾವೇ ಮತ್ತೊಮ್ಮೆ ಹೊಗಳಿಕೆಗಳ ಭಾರವನ್ನು ಹೊತ್ತ ಬಸುರಿ ಪಾತರಗಿತ್ತಿಯಾಗುತ್ತಾರೆ. ಒಂದು ದಿನ ಎಲ್ಲೋ ಆ ರೂಪವನ್ನು ದೇಹದಿಂದ ಬೇರ್ಪಡಿಸಿಕೊಂಡು ಮತ್ತೊಮ್ಮೆ ಜೊಲ್ಲು ನೇಯುವ ಲಾರ್ವಾಗಳಾಗುತ್ತಾರೆ.ಹೀಗೆ ಮತ್ತೊಂದು ಜೀವನಕ್ರಮ/ಚಕ್ರ ಮುಂದುವರೆಯುತ್ತದೆ.
ಇಲ್ಲಿಯೇ ಬಹಳಷ್ಟು ಬರಹಗಾರರು ಕಳೆದುಹೋಗಿದ್ದು. ಮತ್ತೊಮ್ಮೆ ಬಣ್ಣದ ಚಿಟ್ಟೆಯಾಗಿ ರೂಪಗೊಳ್ಳುವುದು ಬೇಸರವಾಗಿಯೋ ಅಥವಾ ಈ ಸಾರಿಯೂ ತಾನು ಅದೇ ಬಣ್ಣದ ಚಿಟ್ಟೆಯಾಗಿ ಮೂಡಿಬಿಟ್ಟರೆ ನೋಡುಗನಿಗೆ (ಓದುಗರಿಗೆ) ಆನಂದಿಸದಿದ್ದರೆ? ಎನ್ನುವ ಭಯದಿಂದಲೋ, ಇಲ್ಲಾ ಒಮ್ಮೆ ಕಳೆದ ಸಮಾಧಿಸ್ಥಿತಿಯತ್ತ ಮತ್ತೊಮ್ಮೆ ರೇಷ್ಮೆ ನೂಲು ಸುತ್ತಿಕೊಂಡೂ ಜಗತ್ತಿನೊಂದಿಗೆ ಪರಿವೆಯೇ ಇಲ್ಲದ ಬಾಳು ಬದುಕಲಾರದೆಯೋ ಕಳೆದುಹೋಗುತ್ತಾರೆ. ಇದರಿಂದಾಚೆಗೆ ಮುಂದುವರೆಯುವ ನಿರ್ಧಾರ ಕಠಿಣವಾದದ್ದು. ಮುಂಚೆ ನಡೆದ ಹಾದಿ ಪೂರ್ವನಿರ್ಧಾರಿತವಾದದ್ದು ಇರಬಹುದು ಪೂರ್ವನಿರ್ಧಾರಿತವಾಗದೇ ಇದ್ದದ್ದೂ ಇರಬಹುದು. ಆದರೆ ಎರಡನೇ ಬಾರಿಗೆ ನಡೆಯುವುದಾದರೆ ನಿರ್ಧರಿಸಿಯೇ ಮುನ್ನುಗ್ಗಬೇಕಾಗುತ್ತದೆ. ಅಷ್ಟೇ ಅಲ್ಲ ಇನ್ನು ಮುಂದಿನ ಪ್ರತಿ ಜೀವಚಕ್ರಗಳೂ ವೇಳೆ ಕಠಿಣ ಪರಿಶ್ರಮವನ್ನಷ್ಟಲ್ಲದೇ ನಿರಂತರ ಶ್ರದ್ಧೆಯನ್ನೂ ಆಶಾವಾದವನ್ನೂ, ತಿದ್ದಿಕೊಂಡು ನಡೆಯುವ ಧೈರ್ಯವನ್ನೂ ಕೇಳುತ್ತವೆ.
ತಾಂತ್ರಿಕವಾಗಿ ಸಾಕಷ್ಟು ಮುಂದುವರೆದ ಇಂದಿನ ಜನಾಂಗದ ಜೀವನಶೈಲಿಯಲ್ಲಿ ನಮಗೆಲ್ಲರಿಗಾದ ಬಹುದೊಡ್ಡ ನಷ್ಟವೆಂದರೆ 'ಶ್ರದ್ಧೆ'ಯೆಂಬ ಪದ ಕೇವಲ ಅಕ್ಷರಗುಚ್ಚವಾಗಿದ್ದು. ಒಂದೇ ಹೂವಿನಲ್ಲಿ ನಿಲ್ಲದ ಚಿಟ್ಟೆಯಂತಾಗಿದೆ ಬದುಕು. ಎಲ್ಲದರಲ್ಲೂ ಮನಸು ಶೀಘ್ರ ಬದಲಾವಣೆ ಕೇಳುತ್ತದೆ. ಹಾಗೆಯೇ ಓದುಗರೂ ಕೂಡ ಎಂದು ತಿಳಿದುಕೊಂಡು ಬದಲಾವಣೆಯತ್ತ ನನ್ನ ಈ ಮೊದಲ ಹೆಜ್ಜೆ.
ತರ್ಜುಮೆ - ಭಾವಾನುವಾದದ ಬರಹಗಳಿಗಿಂತ ಸ್ವಂತ ಸೃಷ್ಟಿಯನ್ನೇ (ಅಂದುಕೊಂಡಿದ್ದೇನೆ) ಬರೆಯಬೇಕು ಎಂದು ನಿರ್ಧರಿಸಿದ್ದೆನಾದರೂ, ನನ್ನ ನಿರ್ಧಾರಕ್ಕೆ ಎಳ್ಳು-ನೀರು ಬಿಡಿಸಿದವನು ಖಲೀಲ್ ಗಿಬ್ರಾನ್. ೧೯೮೩ ರಲ್ಲಿ ಲೆಬನಾನ್ ನಲ್ಲಿ ಜನಿಸಿದ ಖಲೀಲ್ ಗಿಬ್ರಾನ್ ಹಿಂದಿನ ಶತಮಾನ ಕಂಡ ಈ ಶತಮಾನವನ್ನೂ ಆಕ್ರಮಿಸಿದ ಬಹುದೊಡ್ಡ ಕವಿ ದಾರ್ಶನಿಕ. ಅವನ ಬರವಣಿಗೆಗಳು ಕೇವಲ ಪ್ರಶಂಸೆಗೊಳಪಟ್ಟಿದ್ದು ಅಲ್ಲದೇ ತತ್ವಜ್ಞಾನ ಮತ್ತು ದಾರ್ಶನಿಕತೆಯನ್ನು ಸರಳ ಸುಂದರ ರೂಪಕಗಳಲ್ಲಿ ನಿರೂಪಿಸಲ್ಪಟ್ಟ ಸುಗಂಧ ಬೀರುವ ಹೂಗಳು.
ಗದ್ಯವನ್ನು ಪದ್ಯವಾಗಿಸುವ ಶೈಲಿ ನವ್ಯ ಎಂದು ಕರೆಸಿಕೊಳ್ಳಬಹುದೇನೋ ಗೊತ್ತಿಲ್ಲ. ಅಂಥದ್ದೊಂದು ಶೈಲಿ ಇದೆಯಾದರೂ ಪದ್ಯವನ್ನು ಗದ್ಯವಾಗಿಸುವ, ಗದ್ಯವಾಗಿಸಿಯೂ ಪದ್ಯದ ಚೆಲುವನ್ನು ಬಿಟ್ಟುಕೊಳ್ಳದಂಥ ಗದ್ಯಕ್ಕೆ ಅತ್ಯುತ್ತಮ ಉದಾಹರಣೆ ಖಲೀಲ್ ಗಿಬ್ರಾನ್ ನ ಬರಹಗಳು.
ಖಲೀಲ್ ಗಿಬ್ರಾನ್ ನ ಮೂರು ಪುಸ್ತಗಳ ಸಂಗ್ರಹವನ್ನು ಎರಡು ಬಾರಿ ತಿರುವಿ ಹಾಕಿದ ನಂತರ ಇಂತಹ ಸುಂದರವಾದ ಸಿಹಿಯಾದ ಮುತ್ತುಗಳಂತೆ ಪೋಣಿಸಿದ ಕತೆ ಕವಿತೆಗಳನ್ನು ಕನ್ನಡೀಕರಿಸಿದರೆ ನನ್ನ ಬರಹ ಶೈಲಿಯೂ ಸುಧಾರಿಸಿಕೊಳ್ಳಬಹುದು ಹಾಗೆಯೇ ಮುಖ್ಯವಾಗಿ ಬರೀ ಜೋಳದ ರೊಟ್ಟಿ ಹಿಂಡಿ ಚಟ್ನಿಯನ್ನೇ ಬಡಿಸಿ, ಅದನ್ನೇ ತಿಂದು ತಿಂದು ಬೇಸರಗೊಂಡ ನನ್ನ ಓದುಗರಿಗೂ ಗುಲಾಬಿ ಪಕಳೆಗಳಲ್ಲಿ ಅಲಂಕರಿಸಿದ ಬೊಗಸೆಯಲ್ಲಿ ಜೇನಿನಂಥ ಶ್ಯಾವಿಗೆ ಪಾಯಸ ನೀಡೋಣ ಅನ್ನೋ ಆಸೆಯೊಂದಿಗೆ ಅವನ ಬರಹಗಳ ತರ್ಜುಮೆಗೆ/ಭಾವಾನುವಾದಕ್ಕೆ ಕೈ ಹಾಕಿದ್ದೇನೆ. ನನ್ನ ಸೀಮಿತ ಶಬ್ದಜ್ಞಾನದೊಂದಿಗೆ ಖಲೀಲ್ ಗಿಬ್ರಾನ್ ನ ಬರಹದ ಭಾವಗಳನ್ನು ಸಜೀವವಾಗಿಯೇ ನಿಮಗೆ ತಲುಪಿಸಬಲ್ಲೆ ಅನ್ನೋ ಧೈರ್ಯದೊಂದಿಗೆ ಹಾಗೆಯೇ ಓದುಗರು ನೀವೆಲ್ಲ ನನ್ನನ್ನು ಒಪ್ಪಿಕೊಳ್ಳುತ್ತಾರೆ ನನ್ನನು ತಿದ್ದಿ ಮುನ್ನಡೆಸುತ್ತಾರೆ ಅನ್ನೋ ಧೃಡವಾದ ನಂಬಿಕೆಯಿಂದ ಮೊದಲ ಹೆಜ್ಜೆಯನ್ನಿಟ್ಟಿದ್ದೇನೆ.ಎಡವಿದಲ್ಲಿ ಕೈ ಹಿಡಿದು ನಡೆಸಿರಿ ಎಂದು ಕೇಳಿಕೊಳ್ಳುತ್ತಾ....